ಆಯುಷ್ಮಾನ್ ಭಾರತ ಫಲಾನುಭವಿಗಳಿಗೆ ಕೊರೋನ ವೈರಸ್ ಉಚಿತ ತಪಾಸಣೆ, ಚಿಕಿತ್ಸೆ

Update: 2020-04-04 16:22 GMT

ಹೊಸದಿಲ್ಲಿ, ಎ.4: ಕೇಂದ್ರ ಸರಕಾರವು 50 ಕೋಟಿಗೂ ಅಧಿಕ ಆಯುಷ್ಮಾನ್ ಭಾರತ ಆರೋಗ್ಯ ವಿಮಾ ಯೋಜನೆಯ ಫಲಾನುಭವಿಗಳಿಗೆ ಉಚಿತ ಕೊರೋನ ವೈರಸ್ ತಪಾಸಣೆ ಮತ್ತು ಚಿಕಿತ್ಸಾ ಸೌಲಭ್ಯಗಳನ್ನು ಒದಗಿಸಲಿದೆ ಎಂದು ಯೋಜನೆಯ ಅನುಷ್ಠಾನದ ಹೊಣೆಯನ್ನು ಹೊತ್ತಿರುವ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರವು ಶನಿವಾರ ತಿಳಿಸಿದೆ.

ಇದಕ್ಕಾಗಿ ಖಾಸಗಿ ಲ್ಯಾಬ್‌ಗಳು ಮತ್ತು ನೋಂದಾಯಿತ ಆಸ್ಪತ್ರೆಗಳ ಸಹಭಾಗಿತ್ವವನ್ನು ಪಡೆದುಕೊಳ್ಳಲಾಗುವುದು ಎಂದೂ ಅದು ಹೇಳಿಕೆಯಲ್ಲಿ ತಿಳಿಸಿದೆ.

ಸರಕಾರಿ ಆಸ್ಪತ್ರೆಗಳಲ್ಲಿ ಈಗಾಗಲೇ ಕೊರೋನ ವೈರಸ್ ತಪಾಸಣೆ ಮತ್ತು ಚಿಕಿತ್ಸೆ ಉಚಿತವಾಗಿದೆ. ಈಗ ಆಯುಷ್ಮಾನ್ ಭಾರತ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಖಾಸಗಿ ಲ್ಯಾಬ್‌ಗಳಲ್ಲಿ ತಪಾಸಣೆ ಮತ್ತು ನೋಂದಾಯಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಉಚಿತವಾಗಿ ಲಭ್ಯವಾಗಲಿದೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ ಟ್ವೀಟಿಸಿದ್ದಾರೆ.

ಕೊರೋನ ವೈರಸ್ ಹರಡುವಿಕೆಯನ್ನು ತಡೆಯಲು ಕೇಂದ್ರವು ಲಾಕ್‌ಡೌನ್ ಅನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುತ್ತಿದೆ. ಆದರೆ ಕನಿಷ್ಠ ತಪಾಸಣೆ ಸೌಲಭ್ಯಗಳನ್ನು ಹೊಂದಿರುವ ವೈರಸ್ ಪೀಡಿತ ದೇಶಗಳ ಪೈಕಿ ಭಾರತವೂ ಒಂದಾಗಿದೆ. ಖಾಸಗಿ ಲ್ಯಾಬ್‌ಗಳು ಕೊರೋನ ವೈರಸ್ ಸೋಂಕು ತಪಾಸಣೆ ನಡೆಸಲು ಸರಕಾರವು ಅನುಮತಿ ನೀಡಿದೆಯಾದರೂ ಅವುಗಳು ವಿಧಿಸುವ 4,500 ರೂ.ಗಳ ತಪಾಸಣಾ ಶುಲ್ಕವನ್ನು ಭರಿಸಲು ಬಡವರಿಗೆ ಸಾಧ್ಯವಿಲ್ಲ ಎಂಬ ಕಳವಳಗಳು ವ್ಯಕ್ತವಾಗಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News