ಬಿಜೆಪಿ ಸಂಸ್ಥಾಪನಾ ದಿನ ಆಚರಿಸಲು ಪ್ರಧಾನಿಯಿಂದ ಕೊರೋನ ಸಂಕಷ್ಟ ದುರ್ಬಳಕೆ: ಕುಮಾರಸ್ವಾಮಿ

Update: 2020-04-05 11:28 GMT

ಬೆಂಗಳೂರು, ಎ. 5: 'ಬಿಜೆಪಿ ಸಂಸ್ಥಾಪನಾ ದಿನ ಆಚರಿಸಲು ಕೊರೋನ ಸಂಕಷ್ಟವನ್ನು ಪ್ರಧಾನಿ ಮೋದಿ ದುರುಪಯೋಗ ಮಾಡಿಕೊಂಡರೇ?' ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ರವಿವಾರ ಸರಣಿ ಟ್ವೀಟ್ ಮಾಡಿರುವ ಅವರು, 'ಎ.6 1980 ಬಿಜೆಪಿ ಸಂಸ್ಥಾಪನಾ ದಿನ. ಇಂದಿನ ದಿನ ಬಿಜೆಪಿಗೆ ನಲವತ್ತು ವರ್ಷ ತುಂಬುತ್ತದೆ. ತನ್ನ ಸಂಸ್ಥಾಪನಾ ದಿನದ ಸಂಭ್ರಮೋತ್ಸವವನ್ನು ಕೊರೋನ ಸಂಕಷ್ಟದ ದಿನಗಳಲ್ಲಿ ನೇರಾ ನೇರಾ ಆಚರಿಸಲು ಹಿಂಜರಿದ ಬಿಜೆಪಿ ಪರೋಕ್ಷವಾಗಿ ಇಡೀ ದೇಶದ ಜನತೆ ಕೈಯಲ್ಲಿ ದೀಪ ಬೆಳಗಿಸಿ ತನ್ನ ಭಂಡತನವನ್ನು ಮೆರೆಯುತ್ತಿದೆ' ಎಂದು ಆಕ್ರೋಶ ಹೊರಹಾಕಿದ್ದಾರೆ.

ದೇಶದ ಸಂಕಟವನ್ನು ಬಗೆಹರಿಸುವ ಯಾವುದೇ ಮಾರ್ಗೋಪಾಯಗಳನ್ನು ದೇಶಕ್ಕೆ ಹೇಳದೆ ಪ್ರಧಾನಿ ಮೋದಿ ಎ.5ನ್ನು ಆಯ್ದುಕೊಂಡಿದ್ದಕ್ಕೆ ಬೇರೆ ಏನು ವೈಜ್ಞಾನಿಕ, ವೈಚಾರಿಕ ಕಾರಣ ಎಂಬುದನ್ನು ಸ್ಪಷ್ಟಪಡಿಸಬೇಕು. ದೇಶ ಹಿಂದೆಂದೂ ಕಂಡಿರಯದ ಕಷ್ಟದ ದಿನಗಳಲ್ಲಿ ಇರುವಾಗ ದೀಪ ಬೆಳಗಿಸಿ ಒಗ್ಗಟ್ಟು ಪ್ರದರ್ಶಿಸುವ ನೆಪದಲ್ಲಿ ಈ ತರದ ತೋರಿಕೆ ಸಂಭ್ರಮ ಬೇಕೇ?' ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

'ಜಗತ್ತು ಕೊರೋನ ಮಹಾಮಾರಿಯಿಂದ ತತ್ತರಿಸುವ ಸಂದರ್ಭದಲ್ಲಿ ಇಂತಹ ರಹಸ್ಯ ಕಾರ್ಯಸೂಚಿ ಅರ್ಥಾತ್ ಪರದೆ ಹಿಂದಿನ ಸತ್ಯ ಮರೆಮಾಚಿ ಅಕಾಲಿಕ ದೀಪಾವಳಿ ಮಾಡಬೇಕೇ? ಕರುಣಾಳು ಬಾ ಬೆಳಕೆ ಮುಸುಕಿದೀ ಮಬ್ಬಿನಲಿ ಕೈಹಿಡಿದು ನಡೆಸೆನ್ನನು' ಎಂದು ಕುಮಾರಸ್ವಾಮಿ ಟ್ವಿಟ್ಟರ್ ಮೂಲಕ ಲೇವಡಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News