ಲಾಕ್‍ಡೌನ್ ಎಫೆಕ್ಟ್: ಅನ್ನ, ನೀರು ಸಿಗದೆ ವೃದ್ಧ ಸಾವು
Update: 2020-04-05 18:44 IST
ಬೆಳಗಾವಿ, ಎ.5: ದೇಶದಲ್ಲಿ ಲಾಕ್‍ಡೌನ್ ಘೋಷಣೆ ಬಳಿಕ ಭಿಕ್ಷುಕರು, ನಿರಾಶ್ರಿತರು, ಬಡವರು ಊಟವಿಲ್ಲದೇ ಕಂಗಾಲಾಗಿ ಹೋಗಿದ್ದಾರೆ. ಅದೇ ರೀತಿ ಅಥಣಿ ಪಟ್ಟಣದ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣದ ಅಥಣಿ ಘಟಕದಲ್ಲಿ ವೃದ್ಧರೊಬ್ಬರು ಅನ್ನ, ನೀರು ಸಿಗದೆ ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದೆ.
ಲಾಕ್‍ಡೌನ್ ಆದೇಶದ ಬಳಿಕ ಬಸ್ ನಿಲ್ದಾಣ ಸಂಪೂರ್ಣ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಅಪರಿಚಿತ ವೃದ್ಧ ಅಲ್ಲೆ ವಾಸವಾಗಿದ್ದ ಎಂದು ತಿಳಿದು ಬಂದಿದೆ. ಆದರೆ, ಕೊರೋನ ವೈರಸ್‍ನಿಂದಾಗಿ ಎಲ್ಲ ಹೊಟೇಲ್‍ಗಳು ಮುಚ್ಚಿದ್ದರಿಂದಾಗಿ ಅನ್ನ, ನೀರು ಸಿಗದೆ ಮೃತಪಟ್ಟಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಪೌರ ಕಾರ್ಮಿಕರು ಬಸ್ ನಿಲ್ದಾಣ ಸ್ವಚ್ಛ ಮಾಡಲು ಬಂದಾಗ ಮೃತದೇಹ ಪತ್ತೆಯಾಗಿದೆ. ಅನಂತರ ಅಥಣಿ ಪುರಸಭೆ ಸಿಬ್ಬಂದಿ ಅಲ್ಲಿಂದ ಮೃತದೇಹ ಸ್ಥಳಾಂತರಿಸಿ ಶವಸಂಸ್ಕಾರ ನೆರವೇರಿಸಿದ್ದಾರೆ. ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.