ನಿಝಾಮುದ್ದೀನ್ ಸಭೆಯಲ್ಲಿ ಪಾಲ್ಗೊಂಡ ಮಾತ್ರಕ್ಕೆ ಅವರಿಂದ ವೈರಸ್ ಹರಡುತ್ತದೆ ಎಂದು ಹೇಳಲು ಸಾಧ್ಯವಿಲ್ಲ: ಹೈಕೋರ್ಟ್

Update: 2020-04-05 15:18 GMT

ಬೆಂಗಳೂರು, ಎ.5: ಹೊಸದಿಲ್ಲಿಯ ನಿಝಾಮುದ್ದೀನ್ ಮರ್ಕಝ್ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡವರನ್ನು ತಕ್ಷಣವೇ ಪತ್ತೆ ಹಚ್ಚಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ಹೈಕೋರ್ಟ್ ರಾಜ್ಯ ಸರಕಾರಕ್ಕೆ ಸೂಚಿಸಿದೆ.

ದೇಶದಲ್ಲಿ ಲಾಕ್‍ಡೌನ್‍ಗೆ ಸಂಬಂಧಿಸಿದಂತೆ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಮತ್ತು ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರಿದ್ದ ವಿಭಾಗೀಯ ನ್ಯಾಯಪೀಠ, ಈ ಮೇಲಿನ ಸೂಚನೆ ನೀಡಿತು.

ನಿಝಾಮುದ್ದೀನ್ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡ ಮಾತ್ರಕ್ಕೆ ಅವರಿಂದ ಕೊರೋನ ವೈರಸ್ ಹರಡುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಆದಾಗ್ಯೂ, ನಿಝಾಮುದ್ದೀನ್ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡವರು ರಾಜ್ಯಕ್ಕೆ ಬರುವವರ ಹಾಗೂ ಈಗಾಗಲೇ ಬಂದವರ ಬಗ್ಗೆ ಮಾಹಿತಿಯನ್ನು ಕಲೆ ಹಾಕುವುದು ರಾಜ್ಯ ಸರಕಾರದ ಕರ್ತವ್ಯವಾಗಿದೆ. ಇದರಿಂದ, ಇನ್ನೂ ಹಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬಹುದೆಂದು ನ್ಯಾಯಪೀಠವು ರಾಜ್ಯ ಸರಕಾರಕ್ಕೆ ತಿಳಿಸಿ, ವಿಚಾರಣೆಯನ್ನು ಎ.9ಕ್ಕೆ ಮುಂದೂಡಿತು.

ಅರ್ಜಿದಾರರ ಪರವಾಗಿ ರೆಹಮತ್ ಉಲ್ಲಾ ಕೊತ್ವಾಲ್, ಕ್ಲಿಷ್ಟನ್, ರೊಝಾರಿಯೊ, ಮೈತ್ರಿಯಾ ವಾದಿಸಿದರು. ಇದೇ ಸಂದರ್ಭ ರೆಹಮತ್ ಉಲ್ಲಾ ಕೊತ್ವಾಲ್, ರಾಜ್ಯದಲ್ಲಿ ಕೊರೋನ ವೈರಸ್ ವಿರುದ್ಧ ಹೋರಾಡಲು ಹತ್ತು ಸಾವಿರ ವೆಂಟಿಲೇಟರ್ ಗಳ ಅವಶ್ಯಕತೆ ಇದೆ. ಆದರೆ, ರಾಜ್ಯದಲ್ಲಿ ವೆಂಟಿಲೇಟರ್ ಗಳ ಕೊರತೆ ಇದೆ ಎಂದು ಪೀಠಕ್ಕೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News