ಬೆಂಗಳೂರು: ಆಸ್ಪತ್ರೆಯಲ್ಲಿ ಕ್ವಾರಂಟೈನ್‍ನಲ್ಲಿದ್ದ 47 ಮಂದಿ ಬಿಡುಗಡೆ

Update: 2020-04-05 17:41 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಎ.5: ಕೊರೋನ ಸೋಂಕಿನ ಶಂಕೆಯ ಹಿನ್ನೆಲೆಯಲ್ಲಿ ನಗರದ ಸಪ್ತಗಿರಿ ಆಸ್ಪತ್ರೆಯಲ್ಲಿ ಕಳೆದ 16 ದಿನಗಳಿಂದ ಕ್ವಾರೆಂಟೈನ್‍ನಲ್ಲಿದ್ದ ದೇಶ, ವಿದೇಶಗಳ 47 ಮಂದಿಯನ್ನು ಇಂದು ಬಿಡುಗಡೆಗೊಳಿಸಲಾಗಿದೆ.

ಆಸ್ಟ್ರೇಲಿಯಾ, ಜಪಾನ್, ದುಬೈ, ಸಿಂಗಾಪುರ ಸೇರಿ ಆರು ದೇಶಗಳ ಪ್ರಯಾಣಿಕರು, ಬೆಂಗಳೂರಿನ ಜಿಲ್ಲಾಡಳಿತದ ಸಹಯೋಗದೊಂದಿಗೆ ಕ್ವಾರೆಂಟೈನ್ ಅವಧಿ ಪೂರ್ಣಗೊಳಿಸಿದರು. ಈ ಅವಧಿಯಲ್ಲಿ ಸಪ್ತಗಿರಿ ಆಸ್ಪತ್ರೆಯ ತಜ್ಞ ವೈದ್ಯಕೀಯ ಸಿಬ್ಬಂದಿ ದಿನದ 24ಗಂಟೆ ಕ್ವಾರಂಟೈನ್‍ನಲ್ಲಿದ್ದವರಿಗೆ ಸೂಕ್ತ ರೀತಿಯಲ್ಲಿ ಚಿಕಿತ್ಸೆ ನೀಡಿದ್ದರು.

ಈ ಅವಧಿಯಲ್ಲಿ ಬೆಂಗಳೂರು ಜಿಲ್ಲಾಡಳಿತ, ಜಿಲ್ಲಾ, ತಾಲೂಕು ಆರೋಗ್ಯಾಧಿಕಾರಿಗಳು ಆಸ್ಪತ್ರೆಯ ಸಿಬ್ಬಂದಿಯ ಜತೆ ಉತ್ತಮ ಸಮನ್ವಯತೆಯಿಂದ ಕೆಲಸ ಮಾಡಿದ್ದರು. ಆಸ್ಪತ್ರೆಯ ಡೀನ್ ಡಾ.ಜಯಂತಿ, ಮಾನಸಿಕ ತಜ್ಞರಾದ ಶೋಯಿಬ್ ಮತ್ತು ಸಂತೋಷ್ ಉನ್ನಿ ಕ್ವಾರಂಟೈನ್‍ನಲ್ಲಿ ಇದ್ದವರಿಗೆ ಉತ್ತಮ ರೀತಿಯಲ್ಲಿ ಕೌನ್ಸಲಿಂಗ್ ಮಾಡಿ ಸ್ಥೈರ್ಯ ತುಂಬುವ ಕೆಲಸ ಮಾಡಿದ್ದರು.

ಇವರು ಪ್ರಾರಂಭದಲ್ಲಿ ಆಸ್ಪತ್ರೆಗೆ ಸೇರಿದಾಗ ಸಣ್ಣ ಪ್ರಮಾಣದಲ್ಲಿ ಶೀತ, ಜ್ವರ ಇತ್ತು. ಹೀಗಾಗಿ ಎಲ್ಲರ ಗಂಟಲು ದ್ರವದ ಮಾದರಿ ಪರೀಕ್ಷೆ ನಡೆಸಿದಾಗ ನೆಗೆಟೀವ್ ಬಂದಿತ್ತು. ಆದರೂ ಇವರನ್ನು ವಿಶೇಷ ವಾರ್ಡ್‍ನಲ್ಲಿ ದಾಖಲಿಸಿಕೊಂಡು ಚಿಕಿತ್ಸೆ ನೀಡಲಾಗಿತ್ತು. ಈಗ 16 ದಿನಗಳ ನಂತರ ಇವರನ್ನು ಬಿಡುಗಡೆಗೊಳಿಸಲಾಗಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News