×
Ad

ಶಬೇ ಬರಾಅತ್ ಅಂಗವಾಗಿ ನಡೆಯುವ ಸಾಮೂಹಿಕ ಪ್ರಾರ್ಥನೆ ನಿಷೇಧ: ವಕ್ಫ್ ಬೋರ್ಡ್ ಆದೇಶ

Update: 2020-04-06 17:40 IST

ಬೆಂಗಳೂರು, ಎ.6: ಕೋವಿಡ್-19 ಸೋಂಕು ಹರಡುವುದನ್ನು ನಿಯಂತ್ರಿಸುವ ಉದ್ದೇಶದಿಂದ ರಾಜ್ಯ ಸರಕಾರ ಹಾಗೂ ಇಮಾರತ್-ಎ-ಶರೀಅ ನೀಡಿರುವ ಸೂಚನೆ ಹಿನ್ನೆಲೆಯಲ್ಲಿ ಎ.9ರಂದು ಆಚರಿಸಲಾಗುವ ಶಬೇ ಬರಾಅತ್ ಅಂಗವಾಗಿ ರಾಜ್ಯಾದ್ಯಂತ ಎಲ್ಲ ಮಸೀದಿಗಳು, ಖಬರಸ್ತಾನ್(ಸ್ಮಶಾನ) ಹಾಗೂ ದರ್ಗಾಗಳಲ್ಲಿ ಸಾಮೂಹಿಕ ಪ್ರಾರ್ಥನೆ ನೆರವೇರಿಸುವುದನ್ನು ನಿಷೇಧಿಸಿ ರಾಜ್ಯ ವಕ್ಫ್ ಬೋರ್ಡ್ ಆದೇಶ ಹೊರಡಿಸಿದೆ.

ಖಬರಸ್ತಾನ್ ಗಳಲ್ಲಿಯೂ ಯಾವುದೆ ರೀತಿಯ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಲು ಅವಕಾಶವಿರುವುದಿಲ್ಲ. ಆದುದರಿಂದ, ಖಬರಸ್ತಾನದ ದ್ವಾರಗಳನ್ನು ಮುಚ್ಚಿಡಬೇಕು. ಸಾರ್ವಜನಿಕರ ಆರೋಗ್ಯ ಹಿತದೃಷ್ಟಿಯಿಂದ ಖಬರಸ್ತಾನದ ಆಡಳಿತ ಸಮಿತಿಯವರು ಈ ನಿಟ್ಟಿನಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ರಾಜ್ಯ ವಕ್ಫ್ ಬೋರ್ಡ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಇಸ್ಲಾಹುದ್ದೀನ್ ಗದ್ಯಾಲ್ ಸೂಚಿಸಿದ್ದಾರೆ.

ಎಲ್ಲ ವಕ್ಫ್ ಅಧಿಕಾರಿಗಳು, ಜಿಲ್ಲಾ ವಕ್ಫ್ ಸಲಹಾ ಸಮಿತಿಗಳು ಈ ಆದೇಶವನ್ನು ಅನುಷ್ಠಾನಗೊಳಿಸಲು ಮುಂದಾಗಬೇಕು. ವಕ್ಫ್ ಸಂಸ್ಥೆಗಳಿಗೂ ಈ ನಿಟ್ಟಿನಲ್ಲಿ ಅಗತ್ಯ ಸೂಚನೆಗಳನ್ನು ರವಾನಿಸಬೇಕು ಎಂದು ಅವರು ಆದೇಶದಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News