ಬಾಗಲಕೋಟೆ: ಸಮಯಕ್ಕೆ ಬಾರದ ಆ್ಯಂಬುಲೆನ್ಸ್; ಹೆದ್ದಾರಿಯಲ್ಲಿಯೇ ಹೆರಿಗೆ

Update: 2020-04-06 13:00 GMT
ಸಾಂದರ್ಭಿಕ ಚಿತ್ರ

ಬಾಗಲಕೋಟೆ, ಎ.6: ಆಸ್ಪತ್ರೆಗೆ ಹೋಗಲು ಆಂಬುಲೆನ್ಸ್ ಲಭ್ಯವಾಗದ ಹಿನ್ನೆಲೆ ಗರ್ಭಿಣಿಯೊಬ್ಬಳು ಹೆದ್ದಾರಿಯಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ ಘಟನೆ ನಡೆದಿದೆ.

ಬಾಗಲಕೋಟೆಯ ಮುಧೋಳ-ನಿಪ್ಪಾಣಿ ರಾಜ್ಯ ಹೆದ್ದಾರಿಯಲ್ಲಿ ಮಹಿಳೆಗೆ ಹೆರಿಗೆಯಾಗಿದ್ದು ಅದೃಷ್ಟವಶಾತ್ ತಾಯಿ ಮಗು ಇಬ್ಬರೂ ಆರೋಗ್ಯವಾಗಿದ್ದಾರೆ.

ಬಾಗಲಕೋಟೆ ಜಿಲ್ಲೆ ರಬಕವಿ-ಬನಹಟ್ಟಿ ತಾಲೂಕಿನ ಸೈದಾಪುರ ಗ್ರಾಮದ ನಿವಾಸಿ 30 ವರ್ಷದ ಮಂಜುಳಾ ಮುದಕಪ್ಪ ಪಿಡಾಯಿಗೆ ನಿನ್ನೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಆದರೆ, ಕೊರೋನ ವೈರಸ್ ಲಾಕ್‍ಡೌನ್‍ನಿಂದಾಗಿ ಆಂಬುಲೆನ್ಸ್ ಸೇವೆಯಲ್ಲಿ ವ್ಯತ್ಯಯ ಕಂಡು ಬಂದಿತ್ತು ಎಂದು ಹೇಳಲಾಗಿದೆ.

ಇನ್ನು, ಗರ್ಭಿಣಿಯನ್ನು ಆಸ್ಪತ್ರೆಗೆ ಕರೆದೊಯ್ಯಲು ಯಾವುದೇ ಖಾಸಗಿ ವಾಹನಗಳೂ ಲಭ್ಯವಾಗಿರಲಿಲ್ಲ. ಈ ವೇಳೆ ಮಂಜುಳಾರ ಪತಿಯೇ, ಪತ್ನಿಯನ್ನ ತಮ್ಮ ಬೈಕ್ ಮೂಲಕ ಆಸ್ಪತ್ರೆಗೆ ಕರೆದೊಯ್ಯಲು ಯತ್ನಿಸಿದ್ದಾರೆ. ಆದರೆ, ಮುಧೋಳ-ನಿಪ್ಪಾಣಿ ರಾಜ್ಯ ಹೆದ್ದಾರಿಯಲ್ಲಿ ಮಂಜುಳಾಗೆ ಹೆರಿಗೆಯಾಗಿದೆ. ಇನ್ನು, ಹೆರಿಗೆಯ ಬಳಿಕ ಆಂಬುಲೆನ್ಸ್ ಸ್ಥಳಕ್ಕೆ ಬಂದಿದ್ದು, ಬಾಣಂತಿಯನ್ನು ಸದ್ಯ ಮಹಲಿಂಗಪುರ ಸರಕಾರಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News