ಮೈಸೂರಿನಲ್ಲಿ ಮತ್ತೆ ಏಳು ಮಂದಿಗೆ ಕೊರೋನ ದೃಢ: ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 35ಕ್ಕೆ ಏರಿಕೆ

Update: 2020-04-06 13:28 GMT
ಸಾಂದರ್ಭಿಕ ಚಿತ್ರ

ಮೈಸೂರು,ಎ.6: ನಗರದಲ್ಲಿ ಇಂದು ಏಳು ಮಂದಿಗೆ ಕೊರೋನ ಸೋಂಕು ದೃಢಪಟ್ಟಿದ್ದು, ಜಿಲ್ಲೆಯಲ್ಲಿ ಒಟ್ಟು ಕೊರೋನ ಸೋಂಕಿತರ ಸಂಖ್ಯೆ 35ಕ್ಕೆ ಏರಿದೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ತಿಳಿಸಿದರು.

ವಾರ್ತಾಇಲಾಖೆಯ ವತಿಯಿಂದ ಸೋಮವಾರ ಆಯೋಜಿಸಿದ್ದ ಫೇಸ್‍ಬುಕ್ ಲೈವ್‍ನಲ್ಲಿ ಮಾತನಾಡಿದ ಅವರು, ದೆಹಲಿಯಿಂದ ಬಂದ ಮೂವರು, ಜ್ಯುಬಿಲಿಯಂಟ್ ಕಂಪೆನಿಯ ಮೊದಲ ರೋಗಿಯ ಸಂಪರ್ಕದ ಒಬ್ಬರು, ಜ್ಯುಬಿಲಿಯಂಟ್‍ಗೆ ಸೇರಿದ ರೋಗಿ 103ರ ಹತ್ತಿರದ ಒಬ್ಬರು, ರೋಗಿ.104 ರ ಹತ್ತಿರದ ಸಂಬಂಧಿ ಒಬ್ಬರು ಮತ್ತು ವಿದೇಶದಿಂದ ಮೊದಲು ಬಂದ ರೋಗಿ.27ರ ಸಂಬಂಧಿ ಸೇರಿದಂತೆ ಒಟ್ಟು ಏಳು ಮಂದಿಗೆ ಕೊರೋನ ಸೋಂಕು ದೃಡಪಟ್ಟಿದೆ ಎಂದು ಹೇಳಿದರು.

ಹೋಂ ಕ್ವಾರಂಟೈನ್‍ಗಳು ಸ್ಟಿಕರ್ ಹರಿದು ಹಾಕಿದರೆ ಕ್ರಮ: ಈಗಾಗಲೇ ನಂಜನಗೂಡು ನಗರದಲ್ಲಿ ಹೆಚ್ಚು ಹೋಂ ಕ್ವಾರಂಟೈನ್‍ಗಳಿದ್ದು, ಅವರ ಮನೆಯ ಮುಂಭಾಗ ಹಾಕಲಾಗಿರುವ ಸ್ಟಿಕರ್ ಗಳನ್ನು ತೆಗೆದು ಹಾಕುತ್ತಿದ್ದಾರೆ ಎಂಬ ಮಾಹಿತಿ ಬಂದಿದ್ದು, ಅಂತಹವರ ವಿರುದ್ದ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಎಚ್ಚರಿಕೆ ನೀಡಿದರು.

ಹೋಂ ಕ್ವಾರಂಟೈನ್‍ಗಳು ತಮ್ಮ ಮನೆ ಮುಂಭಾಗ ಹಾಕಲಾಗಿರುವ ಸ್ಟಿಕರ್ ಗಳನ್ನು ತೆಗೆದು ಹಾಕಿದ್ದಾರೆ. ಹಾಗೆ ಕೆಲವರು ತೆಗೆದು ಮತ್ತೆ ಅಂಟಿಸಿದ್ದಾರೆ ಎಂಬ ಮಾಹಿತಿ ದೊರೆತಿದೆ. ದಯವಿಟ್ಟು ಹಾಗೆ ಮಾಡಬೇಡಿ, ಇದರಲ್ಲಿ ನಿಮ್ಮ ಕ್ವಾರಂಟೈನ್ ಅವಧಿ ಯಾವಾಗ ಮುಗಿಯಲಿದೆ ಎಂಬ ದಿನಾಂಕ ನಮೂದಿಸಲಾಗಿದೆ. ಆಗ ಸಂಬಂಧಪಟ್ಟ ಆರೋಗ್ಯ ಇಲಾಖೆಯವರು ಬಂದು ತೆಗೆದು ಹಾಕುತ್ತಾರೆ ಎಂದು ಹೇಳಿದರು.

ಈಗಾಗಲೇ ಜಿಲ್ಲೆಯಲ್ಲಿ ಒಟ್ಟು 2,907 ಮಂದಿ ಹೋಂ ಕ್ವಾರಂಟೈನ್‍ಗಳಾಗಿದ್ದು, ಅದರಲ್ಲಿ ಅರ್ಧದಷ್ಟು 1,533 ಮಂದಿ ತಮ್ಮ ಅವಧಿಯನ್ನು ಪೂರ್ಣಗೊಳಿಸಿದ್ದಾರೆ. ಇನ್ನೂ 1,334 ಮಂದಿ ಕ್ವಾರಂಟೈನ್‍ಗಳಾಗಿದ್ದು ಅವರ ಅವಧಿ ಮುಗಿದ ನಂತರ ಅವರ ರಕ್ತ ಮಾದರಿಯ ಸ್ಯಾಂಪಲ್‍ಗಳನ್ನು ಪರೀಕ್ಷಿಸಿ ನಂತರ ನೆಗಟೀವ್ ಬಂದರೆ ಅವರನ್ನು ಕ್ವಾರಂಟೈನ್‍ನಿಂದ ಕಳುಹಿಸಲಾಗುವುದು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News