ರಾಜ್ಯದಲ್ಲಿ ಹೆಚ್ಚುತ್ತಲೇ ಇದೆ ಕೊರೋನ: ಸೋಮವಾರ 12 ಪ್ರಕರಣಗಳು ಪಾಸಿಟಿವ್

Update: 2020-04-06 14:12 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಎ.6: ರಾಜ್ಯದಲ್ಲಿ ಕೊರೋನ ಸೋಂಕಿತರ ಸಂಖ್ಯೆ ಪ್ರತಿದಿನವೂ ಹೆಚ್ಚಳವಾಗುತ್ತಿದ್ದು, ಸೋಮವಾರ ಒಂದೇ ದಿನ 12 ಪ್ರಕರಣಗಳು ವರದಿಯಾಗಿದ್ದು, ಒಟ್ಟಾರೆ ರಾಜ್ಯಾದ್ಯಂತ ಕೊರೋನ ಸೋಂಕಿತರ ಸಂಖ್ಯೆ 163 ಏರಿಕೆಯಾಗಿದೆ. ಅದರಲ್ಲಿ ನಾಲ್ಕು ಮರಣ ಹಾಗೂ 20 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಕರ್ನಾಟಕದಲ್ಲಿ ಲಾಕ್‍ಡೌನ್ ಇದ್ದರೂ ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿಲ್ಲ. ಅದರ ನಡುವೆಯೇ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದ್ದು, ರಾಜ್ಯ ಸರಕಾರ ಮತ್ತಷ್ಟು ಕಠಿಣ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ.

ಸೋಂಕಿತರ ಪೈಕಿ 7 ಮಂದಿ ಮೈಸೂರಿನವರಾಗಿದ್ದು, ಇಬ್ಬರು ಬಾಗಲಕೋಟೆ ಮೂಲದವರಾಗಿದ್ದಾರೆ. ಬೆಂಗಳೂರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ತಲಾ ಒಬ್ಬರು ಸೋಂಕು ಪೀಡಿತರಾಗಿದ್ದಾರೆ. ಕೇರಳ ಮೂಲದ ನಿವಾಸಿಗೆ ಸೋಂಕು ದೃಢಪಟ್ಟಿದ್ದು, ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಭಾರತ ಸರಕಾರದ ಐಸಿಎಂಆರ್ ಬೆಂಬಲಿತ ರಾಜ್ಯದ 10 ಕೋವಿಡ್19 ಪ್ರಯೋಗಾಲಯಗಳನ್ನು ಗುರುತಿಸಲಾಗಿದೆ. ಹಾಸನ ವೈದ್ಯಕೀಯ ವಿಜ್ಞಾನ ಸಂಸ್ಥೆ, ಮೈಸೂರು ವೈದ್ಯಕೀಯ ಕಾಲೇಜು ಹಾಗೂ ಸಂಶೋಧನಾ ಸಂಸ್ಥೆ, ಶಿವಮೊಗ್ಗ ವೈದ್ಯಕೀಯ ವಿಜ್ಞಾನ ಸಂಸ್ಥೆ, ಬೆಂಗಳೂರಿನ ಕಮಾಂಡ್ ಆಸ್ಪತ್ರೆ(ವಾಯುಪಡೆ), ಬೆಂಗಳೂರು ವೈದ್ಯಕೀಯ ಕಾಲೇಜು ಹಾಗೂ ಸಂಶೋಧನಾ ಸಂಸ್ಥೆ, ನ್ಯಾಷನಲ್ ಇನ್ಸಿಟ್ಯೂಟ್ ಆಫ್ ವೈರಾಲಜಿ, ಬೆಂಗಳೂರು ಫೀಲ್ಡ್ ಯೂನಿಟ್, ಗುಲಬರ್ಗಾ ವೈದ್ಯಕೀಯ ವಿಜ್ಞಾನ ಸಂಸ್ಥೆ, ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ, ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ(ನಿಮಾನ್ಸ್), ವೆನ್ಲಾಕ್ ಆಸ್ಪತ್ರೆಗಳನ್ನು ಗುರುತಿಸಲಾಗಿದೆ.

ಮಾಲಿನ್ಯ ನಿಯಂತ್ರಣ ಮಂಡಳಿ ತಮ್ಮ ವೆಬ್‍ಸೈಟ್‍ನಲ್ಲಿ ಪ್ರಕಟಿಸಿದಂತೆ ಕೋವಿಡ್ 19 ರೋಗಿಗಳ ಚಿಕಿತ್ಸೆ, ರೋಗ ನಿರ್ಣಯ ಹಾಗೂ ಕ್ವಾರಂಟೈನ್ ಸಮಯದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ನಿರ್ವಹಿಸುವುದು, ಸಂಸ್ಕರಿಸುವುದು ಹಾಗೂ ವಿಲೇವಾರಿ ಮಾಡುವ ಪರಿಷ್ಕೃತ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗಿದೆ. ರಾಜ್ಯ ವಕ್ಫ್ ಬೋರ್ಡ್‍ನಿಂದ ಮಸೀದಿಯಲ್ಲಿ ಯಾವುದೇ ಸಭೆ, ಪ್ರಾರ್ಥನೆಗೆ ಮಸೀದಿ, ದರ್ಗಾಗಳ ಆಡಳಿತಗಳು ಅನುಮತಿ ನೀಡದಂತೆ ಎಲ್ಲ ವ್ಯವಸ್ಥಾಪಕರಿಗೆ ನಿರ್ದೇಶನ ನೀಡಲಾಗಿರುತ್ತದೆ. ಈ ಕುರಿತು ಕಾರ್ಯನ್ಮೋಖರಾಗುವಂತೆ ಸೂಚಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News