ಮಗ ಗಾಯಗೊಂಡು ಮನೆಯಲ್ಲಿದ್ದರೂ ಕೊರೋನ ವಿರುದ್ಧದ ಹೋರಾಟದಲ್ಲಿ ಆಶಾ ಕಾರ್ಯಕರ್ತೆ

Update: 2020-04-06 15:49 GMT
ದಾನಮ್ಮ

ಯಾದಗಿರಿ, ಎ.6: ಮಗ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೂ ತಾಯಿ(ಆಶಾ ಕಾರ್ಯಕರ್ತೆ) ಮಾತ್ರ ಮಹಾಮಾರಿ ಕೊರೋನ ವೈರಸ್ ವಿರುದ್ಧ ಹೋರಾಡುವ ಮೂಲಕ ಮಗನ ಆರೈಕೆ ಜೊತೆಗೆ ಕರ್ತವ್ಯ ಪ್ರಜ್ಞೆ ಮೆರೆಯುತ್ತಿದ್ದಾರೆ.

ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಕಾಟಮನಹಳ್ಳಿ ನಿವಾಸಿಯಾಗಿರುವ ದಾನಮ್ಮ ಅವರು ಹಲವು ವರ್ಷಗಳಿಂದ ಆಶಾ ಕಾರ್ಯಕರ್ತೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ದಾನಮ್ಮ ಅವರ ಮಗ ರಾಹುಲ್ ಅವರು ವಿಜಾಪುರದಿಂದ ಯಾದಗಿರಿಗೆ ಬೈಕ್‍ನಲ್ಲಿ ಬರುತ್ತಿದ್ದಾಗ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಚಿಕಿತ್ಸೆಗಾಗಿ ಆಸ್ಪತೆಗೆ ದಾಖಲಾಗಿ, ಚಿಕಿತ್ಸೆ ಬಳಿಕ ಮನೆಯಲ್ಲಿಯೇ ಚೇತರಿಸಿಕೊಳ್ಳುತ್ತಿದ್ದಾರೆ.

ಇದರ ಮಧ್ಯೆಯೇ, ಆಶಾ ಕಾರ್ಯಕರ್ತೆಯಾಗಿರುವ ದಾನಮ್ಮ ಅವರು ತಮ್ಮ ಮನೆಯ ಕಷ್ಟವನ್ನು ಬದಿಗಿಟ್ಟು ಜಿಲ್ಲೆಗೆ ವಾಪಸ್ಸಾಗಿರುವ ಕೂಲಿಕಾರ್ಮಿಕರು, ವಿದೇಶದಿಂದ ಬಂದವರಿಗೆ ತಪಾಸಣೆ ನಡೆಸಿ ವರದಿ ತಯಾರಿಸುವ ಜೊತೆಗೆ ವಿವಿಧ ಗ್ರಾಮಗಳಿಗೆ ತೆರಳಿ ಕೊರೋನ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ.

ಇಂತಹ ಸಮಯದಲ್ಲಿಯೂ ತನ್ನ ವೃತ್ತಿಗೆ ಗೌರವ ಕೊಡುತ್ತಿರುವ ದಾನಮ್ಮ, ಮಗನ ಆರೈಕೆ ಜೊತೆಗೆ ಜನರ ಹಿತವನ್ನು ಸಹ ಕಾಯುತ್ತಿದ್ದಾರೆ. ದಾನಮ್ಮ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News