ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆಗೂ ಮುನ್ನ ಒಂದು ವಾರ ತರಗತಿ

Update: 2020-04-06 17:23 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಎ.6: ರಾಜ್ಯದಲ್ಲಿ ಕೊರೋನ ಲಾಕ್‍ಡೌನ್ ಮುಗಿದ ಬಳಿಕ ಎಸೆಸೆಲ್ಸಿ ಪರೀಕ್ಷಾ ಪೂರ್ವವಾಗಿ ಒಂದು ವಾರದ ಅವಧಿಗೆ ವಿದ್ಯಾರ್ಥಿಗಳಿಗೆ ಆಯಾ ಶಾಲೆಗಳಲ್ಲಿ ಪುನರ್ ಮನನ ತರಗತಿಗಳನ್ನು ಆಯೋಜಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ.

ವಿದ್ಯಾರ್ಥಿಗಳು ರಜೆಯ ಅವಧಿಯನ್ನು ಕ್ರಿಯಾಶೀಲವಾಗಿ ಕಳೆಯಲು ಅನುವಾಗುವಂತೆ ಶಿಕ್ಷಣ ಇಲಾಖೆಯ ಯೂಟ್ಯೂಬ್ ಚಾನೆಲನ್ನು ಕೂಡಲೇ ಆರಂಭಿಸಲು ಕ್ರಮ ವಹಿಸಲಾಗುತ್ತಿದೆ. ಶಿಕ್ಷಕರು, ಶಿಕ್ಷಣಾಸಕ್ತರಿಂದ ಕಲಿಕಾ ಸಾಮಗ್ರಿಗಳನ್ನು ಸೃಷ್ಟಿಸಿ ನಾವೀನ್ಯತೆ, ಸೂಕ್ತ ಆಧಾರದಲ್ಲಿ ಮಕ್ಕಳ ಸೃಜನಶೀಲತೆಯನ್ನು ಹೆಚ್ಚಿಸುವ ಕಾರ್ಯಕ್ರಮಗಳನ್ನು ನಿರೂಪಿಸಿ ಪ್ರಸಾರವನ್ನು ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ.

ಕೊರೋನ ಲಾಕ್‍ಡೌನ್ ಮುಗಿದ ಬಳಿಕ ಟಿಇಟಿ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳ ದಿನಾಂಕ ನಿಗದಿಪಡಿಸುವ ಸಂದರ್ಭದಲ್ಲಿ ಬೇರಾವುದೇ ಸ್ಪರ್ಧಾತ್ಮಕ ಪರೀಕ್ಷೆಗಳ ದಿನಾಂಕಗಳಿಗೆ ಘರ್ಷಣೆಯಾಗದ ರೀತಿಯಲ್ಲಿ ನಿಗದಿಪಡಿಸುವುದನ್ನು ಖಾತರಿಪಡಿಸಲು ಸೂಚಿಸಲಾಗಿದೆ.

ರಾಜ್ಯದಲ್ಲಿರುವ ಆಶ್ರಮ ವಸತಿ ಶಾಲೆಗಳ ಶೈಕ್ಷಣಿಕ ಜವಾಬ್ದಾರಿಯನ್ನು ಶಿಕ್ಷಣ ಇಲಾಖೆಯು ತೆಗೆದುಕೊಳ್ಳುವಲ್ಲಿ ಸೂಕ್ತ ಕ್ರಿಯಾ ಯೋಜನೆಗಳನ್ನು ರೂಪಿಸಿ ಕಡತದಲ್ಲಿ ಪ್ರಸ್ತಾವನೆ ಸಲ್ಲಿಸಬೇಕೆಂದು ಪ್ರಾಥಮಿಕ ಶಿಕ್ಷಣ ಇಲಾಖೆಯ ನಿರ್ದೇಶಕರಿಗೆ ತಿಳಿಸಲಾಗಿದೆ ಎಂದು ಶಿಕ್ಷಣ ಇಲಾಖೆ ಪ್ರಕಟನೆಯಲ್ಲಿ ತಿಳಿಸಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News