ಸ್ವಯಂ ಕ್ವಾರಂಟೈನ್: ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಮನೆಯ ಎಲ್ಲ ದಾರಿಗಳು ಬಂದ್

Update: 2020-04-06 17:27 GMT

ಬೆಳಗಾವಿ, ಎ.6: ಬೆಳಗಾವಿ ನಗರದ ಕುವೆಂಪು ನಗರದಲ್ಲಿರುವ ತಮ್ಮ ಮನೆಯಲ್ಲಿಯೇ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸ್ವಯಂ ಕ್ವಾರಂಟೈನ್ ಒಳಗಾಗುವ ಮೂಲಕ ಕೊರೋನ ನಿಯಂತ್ರಣಕ್ಕೆ ಕೈಜೋಡಿಸಿದ್ದಾರೆ.

ಲಕ್ಷ್ಮಿ ಅವರನ್ನು ಭೇಟಿಯಾಗಲು, ಅಹವಾಲು ಸಲ್ಲಿಸಲು ಪ್ರತಿದಿನ ಸಾವಿರಾರು ಜನರು ಬರುತ್ತಿದ್ದರು. ಲಾಕ್‍ಡೌನ್ ಅವಧಿಯಲ್ಲೂ ಜನರ ಓಡಾಟ ನಿಂತಿರಲಿಲ್ಲ. ಇದು ಅಕ್ಕಪಕ್ಕದ ನಿವಾಸಿಗಳಲ್ಲಿ ಭಯ, ಆತಂಕ ಮೂಡಿಸಿತ್ತು. ಕೆಲವರು ಇದರ ಬಗ್ಗೆ ಹೆಬ್ಬಾಳ್ಕರ್ ಅವರ ಗಮನಕ್ಕೂ ತಂದಿದ್ದರು. ಇದನ್ನು ಗಮನಿಸಿದ ಲಕ್ಷ್ಮಿ ಅವರು, ಮನೆಯಿಂದ ಹೊರಗೆ ಬರಬೇಡಿ ನಿಮ್ಮ ಆರೋಗ್ಯಕ್ಕೆ ಸಮಸ್ಯೆಯಾಗಬಹುದು. ಇಲ್ಲಿಗೆ ಬರುವುದನ್ನು ನಿಲ್ಲಿಸಿ ಎಂದು ವಿನಂತಿಸಿಕೊಂಡರೂ ಜನರು ಬರುವುದು ಮುಂದುವರಿದಿತ್ತು.

ಇದನ್ನು ತಡೆಯುವ ಉದ್ದೇಶದಿಂದ ಅವರೇ ಸ್ವತಃ ಪೋಲಿಸರಿಗೆ ವಿನಂತಿಸಿಕೊಂಡು, ಮನೆಗೆ ಸಂಪರ್ಕ ಕಲ್ಪಿಸುವ ಎಲ್ಲ ದಾರಿಗಳಿಗೆ ಬ್ಯಾರಿಕೇಡ್ ಹಾಕಿಸಿ, ಬಂದ್ ಮಾಡಿಸಿದ್ದಾರೆ. ತಾವೇ ಸ್ವಯಂ ಕ್ವಾರಂಟೈನ್‍ಗೆ ಒಳಗಾಗಿದ್ದಾರೆ.

ನಾನಿದ್ದಲ್ಲಿ ಬರುವುದು ಬೇಡ. ಇದರಿಂದ, ನಿಮಗೆ ತೊಂದರೆಯಾಗಬಹುದು. ನೀವು ನಿಮ್ಮ ಮನೆಯಲ್ಲೇ ಇರಿ. ನಿಮ್ಮ ಗ್ರಾಮಗಳಿಗೆ ನಾನೆ ಬರುತ್ತೇನೆ. ನಿಮ್ಮ ಸಮಸ್ಯೆಯನ್ನು ಆಲಿಸುತ್ತೇವೆ. ಸಮಸ್ಯೆಗಳಿದ್ದಲ್ಲಿ ಫೋನ್ ಮಾಡಿದರೂ ಸ್ಪಂದಿಸುತ್ತೇನೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ವಿನಂತಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News