ರಾಜ್ಯದಲ್ಲಿ ಹಕ್ಕಿಜ್ವರ ಕಂಡು ಬಂದಿಲ್ಲ: ಸಚಿವ ಬಿ.ಸಿ.ಪಾಟೀಲ್

Update: 2020-04-06 17:56 GMT

ಬೆಳಗಾವಿ, ಎ.6: ರಾಜ್ಯದಲ್ಲಿ ಕೋಳಿ ಅಥವಾ ಹಕ್ಕಿಜ್ವರ ವರದಿಯಾಗಿಲ್ಲ. ಆದುದರಿಂದ, ಕೋಳಿ ಮಾಂಸ ಸೇವನೆ ಮಾಡಿದರೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ತಿಳಿಸಿದರು.

ಸೋಮವಾರ ನಗರದ ಪ್ರವಾಸಿ ಮಂದಿರದಲ್ಲಿ ಕೋವಿಡ್-19 ಹಿನ್ನೆಲೆಯಲ್ಲಿ ಕೃಷಿ ಸಂಬಂಧಿತ ವಿಷಯಗಳ ಕುರಿತು ನಡೆದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

ಅಗತ್ಯ ವಸ್ತುಗಳ ವ್ಯಾಪಾರ, ವಹಿವಾಟು ನಡೆಸಲು ಯಾವುದೆ ರೀತಿಯ ಸಮಯ ನಿರ್ಬಂಧ ವಿಧಿಸಬಾರದು. ಸಾಮಾಜಿಕ ಆರೋಗ್ಯದ ದೃಷ್ಟಿಯಿಂದ ಲಾಕ್‍ಡೌನ್ ಜಾರಿಗೆ ತರಲಾಗಿದೆ. ಅನಿವಾರ್ಯವಾಗಿ ಕೆಲವೊಂದು ನಿರ್ಬಂಧ ವಿಧಿಸಲಾಗಿದ್ದು, ಜನರು ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು.

ಮಳೆಯಾದರೆ ರೈತರಿಗೆ ಬೀಜ, ಗೊಬ್ಬರ ಮತ್ತಿತರ ಸಾಮಗ್ರಿಗಳ ಕೊರತೆಯಾಗದಂತೆ ಕ್ರಮ ಕೈಗೊಳ್ಳಬೇಕು. ಲಾಕ್‍ಡೌನ್ ಹಿನ್ನೆಲೆಯಲ್ಲಿ ರೈತರು ಬೆಳೆದ ತರಕಾರಿ, ಹಣ್ಣುಗಳ ಮಾರಾಟ ಹಾಗೂ ಸಾಗಾಣಿಕೆಗೆ ಯಾವುದೆ ಅನಾನುಕೂಲ ಆಗಕೂಡದು. ಬಿತ್ತನೆ ಬೀಜ, ಗೊಬ್ಬರ ಮತ್ತು ಕೀಟನಾಶಕಗಳ ಮಾರಾಟ, ಸಾಗಾಣಿಕೆ ಸಮರ್ಪಕವಾಗಿ ಇರಬೇಕು. ಕೃಷಿ ಯಂತ್ರೋಪಕರಣಗಳು ಮತ್ತಿತರ ಸಾಮಗ್ರಿಗಳ ಮಾರಾಟ ವ್ಯವಸ್ಥೆಯನ್ನು ಯಥಾಪ್ರಕಾರ ಕಲ್ಪಿಸಬೇಕು ಎಂದು ಬಿ.ಸಿ.ಪಾಟೀಲ್ ಹೇಳಿದರು.

ವಿಧಾನಪರಿಷತ್ತಿನ ಸರಕಾರದ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ ಮಾತನಾಡಿ, ನೆರೆಯ ರಾಜ್ಯಗಳಿಗೆ ಪೂರೈಕೆಯಾಗುವ ಹಣ್ಣು, ತರಕಾರಿ ಸೇರಿದಂತೆ ಇತರೆ ಸಾಮಗ್ರಿಗಳನ್ನು ಸರಾಗವಾಗಿ ಸಾಗಿಸಲು ಆಯಾ ರಾಜ್ಯದ ಗಡಿಯ ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕು ಎಂದರು.

ಈ ಬಗ್ಗೆ ಈಗಾಗಲೆ ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳ ಗಡಿ ಜಿಲ್ಲೆಯ ಜಿಲ್ಲಾಧಿಕಾರಿಗಳ ಜೊತೆ ಅನೇಕ ಬಾರಿ ಚರ್ಚಿಸಲಾಗಿದೆ. ಆದರೂ, ಸಮಸ್ಯೆ ಉದ್ಭವಿಸಿದಾಗ ತಮ್ಮ ಗಮನಕ್ಕೆ ತಂದರೆ ಮತ್ತೆ ಮಾತನಾಡುತ್ತೇನೆ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ತಿಳಿಸಿದರು.

ಜಿಲ್ಲೆಗೆ 40 ಸಾವಿರ ಕ್ವಿಂಟಾಲ್ ಬಿತ್ತನೆ ಬೀಜ ಅಗತ್ಯವಿದೆ. ಮೇ ಕೊನೆ ಅಥವಾ ಜೂನ್‍ನಲ್ಲಿ ಬಿತ್ತನೆ ಆರಂಭ. ಶೇ.50ರಷ್ಟು ರಸಗೊಬ್ಬರ ದಾಸ್ತಾನು ಇದೆ. ಲಾಕ್‍ಡೌನ್ ಹಿನ್ನೆಲೆಯಲ್ಲಿ ಕೃಷಿ ಉತ್ಪನ್ನ, ಮತ್ತಿತರ ಸಾಮಗ್ರಿಗಳ ಪೂರೈಕೆ ಅಥವಾ ಸಾಗಾಣಿಕೆಗೆ ತೊಂದರೆಯಾಗದಂತೆ ಕ್ರಮ ವಹಿಸಲಾಗಿದೆ. ರೈತ ಸಂಪರ್ಕ ಕೇಂದ್ರಗಳು ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಜಿಲಾನಿ ಮೊಖಾಶಿ ಮಾಹಿತಿ ನೀಡಿದರು.

ಸಭೆಯಲ್ಲಿ ಶಾಸಕರಾದ ಸತೀಶ್ ಜಾರಕಿಹೊಳಿ, ಅನಿಲ್ ಬೆನಕೆ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಆಶಾ ಐಹೊಳೆ, ಪ್ರಾದೇಶಿಕ ಆಯುಕ್ತ ಆಮ್ಲಾನ್ ಆದಿತ್ಯ ಬಿಸ್ವಾಸ್, ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ರವೀಂದ್ರ ಹಕಾಟಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News