ರಾಜ್ಯದ ವಿವಿಧ ಆಸ್ಪತ್ರೆಗಳಿಗೆ ಕೇವಲ 30 ವೆಂಟಿಲೇಟರ್ ಗಳ ಸರಬರಾಜು !

Update: 2020-04-06 17:59 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಎ.6: ಸರಕಾರ ಸಾವಿರಕ್ಕೂ ಅಧಿಕ ವೆಂಟಿಲೇಟರ್ ಗಳ ಅಗತ್ಯವಿದೆ ಎಂದು ತಿಳಿಸಿದೆಯಾದರೂ, ಇದುವರೆಗೂ ಕೇವಲ 30 ವೆಂಟಿಲೇಟರ್ ಗಳಷ್ಟೇ ಬಂದಿದೆ. '2ನೇ ಹಂತದಲ್ಲಿ 100 ವೆಂಟಿಲೇಟರ್ ಗಳನ್ನು ನೀಡಲಾಗುತ್ತದೆ' ಎಂದು ತಯಾರಿಕಾ ಕಂಪೆನಿ ಭರವಸೆ ನೀಡಿದೆ.

ಸರಕಾರ ಈ ಹಿಂದೆ 1,570 ವೆಂಟಿಲೇಟರ್ ಗಳಿಗೆ ಆರ್ಡರ್ ಮಾಡಿದೆ. ಆದರೆ, ಮಾರುಕಟ್ಟೆಗಳಲ್ಲಿ ಬೇಡಿಕೆ ಹೆಚ್ಚಾಗಿದ್ದರಿಂದ ಸಕಾಲದಲ್ಲಿ ವೆಂಟಿಲೇಟರ್ ಗಳು ಸಿಗುತ್ತಿಲ್ಲ. ಈ ಮೊದಲೇ ಆರ್ಡರ್ ಮಾಡಿದ್ದರೆ 500 ಕ್ಕೂ ಅಧಿಕ ವೆಂಟಿಲೇಟರ್ ಗಳು ಸಿಗುತ್ತಿದ್ದವು. ಆದರೆ, ಸರಕಾರದ ಮಟ್ಟದಲ್ಲಿ ಸರಿಯಾದ ನಿರ್ಧಾರವಾಗದ ಹಿನ್ನೆಲೆಯಲ್ಲಿ ವರ್ಕ್ ಆರ್ಡರ್ ನೀಡುವ ವೇಳೆಗೆ ಬೇರೆ ಕಡೆಗಳಿಂದಲೂ ಬೇಡಿಕೆ ಅಧಿಕವಾಗಿ ಬಂದಿದ್ದರಿಂದ ನಿಧಾನವಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವೆಂಟಿಲೇಟರ್ ಗಳನ್ನು ಖರೀದಿಸುವ ಸಂಬಂಧ ತೀರ್ಮಾನಿಸಲಾಗಿದೆ. ಆದರೂ, ಅದನ್ನು ಹೇಗೆ, ಯಾವ ಇಲಾಖೆಯಿಂದ ಖರೀದಿಸಬೇಕು ಎಂಬ ಗೊಂದಲ ಬಗೆಹರಿಯಲು ದಿನಗಳೇ ಕಳೆದವು. ಆರೋಗ್ಯ ಇಲಾಖೆಯೋ ಅಥವಾ ವೈದ್ಯಕೀಯ ಇಲಾಖೆಯಿಂದ ಖರೀದಿಸಬೇಕು ಎಂಬ ತಿಕ್ಕಾಟದಿಂದ ಆರ್ಡರ್ ನೀಡಲು ಸಾಧ್ಯವಾಗಿರಲಿಲ್ಲ.

ಮುಗಿಯದ ಗೊಂದಲ: ಕೊರೋನ ಸಂಕಷ್ಟ ನಿಭಾಯಿಸಲು ಅತಿ ತುರ್ತಾಗಿ ಬೇಕಾಗಿರುವ ವೆಂಟಿಲೇಟರ್ ಗಳ ಸಮಸ್ಯೆ ಸದ್ಯಕ್ಕೆ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಆರೋಗ್ಯ ಸಚಿವ ಶ್ರೀರಾಮುಲು ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ನಡುವೆ ಉಂಟಾದ ಗೊಂದಲವನ್ನು ನಿಭಾಯಿಸಲು ಸಿಎಂ ಸಾಕಷ್ಟು ಸರ್ಕಸ್ ಮಾಡಬೇಕಾಯಿತು. ಅನಂತರ ಕೊರೋನ ಕುರಿತ ಮಾಹಿತಿಯನ್ನು ನೀಡಲು ಸುರೇಶ್‍ ಕುಮಾರ್ ಗೆ ಜವಾಬ್ದಾರಿ ನೀಡಿದ್ದರೂ, ಇವರಿಬ್ಬರ ನಡುವಿನ ಜಗಳ ಮುಗಿದಿಲ್ಲ ಎನ್ನಲಾಗುತ್ತಿದೆ.

2,234 ವೆಂಟಿಲೇಟರ್ ಗಳ ಲಭ್ಯ: ರಾಜ್ಯದಲ್ಲಿ ಪ್ರಸಕ್ತ ಸರಕಾರಿ ಆಸ್ಪತ್ರೆಗಳಲ್ಲಿ 734, ಖಾಸಗಿ ಆಸ್ಪತ್ರೆಗಳಲ್ಲಿ 1,500 ಸೇರಿ ಒಟ್ಟು 2,234 ವೆಂಟಿಲೇಟರ್ ಗಳ ಲಭ್ಯವಿದೆ. ಏನೇ ಸಮಸ್ಯೆಯಿದ್ದರೂ ಎರಡು ಸಾವಿರ ವೆಂಟಿಲೇಟರ್ ಗಳ ತಕ್ಷಣ ಕಾರ್ಯಕ್ಕೆ ಲಭ್ಯವಿರಲಿವೆ ಎಂದು ಅಧಿಕಾರಿಗಳ ಅಭಿಪ್ರಾಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News