ಲಾಕ್‍ಡೌನ್‍ ಎಫೆಕ್ಟ್: ಕೆಎಸ್ಸಾರ್ಟಿಸಿಗೆ ದಿನನಿತ್ಯ ಆಗುವ ನಷ್ಟ ಎಷ್ಟು ಕೋಟಿ ರೂ. ಗೊತ್ತೇ ?

Update: 2020-04-06 18:05 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಎ.6: ರಾಜ್ಯದ ಸಂಚಾರ ವ್ಯವಸ್ಥೆಯ ಬೆನ್ನೆಲುಬು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಲಾಕ್‍ಡೌನ್‍ನಿಂದಾಗಿ ನಿತ್ಯ 9.46 ಕೋಟಿ ನಷ್ಟವಾಗುತ್ತಿದ್ದು, ಬೇರೆ ವಿಭಾಗಗಳ ನಷ್ಟದ ಬಾಬ್ತು ಸಹ ಇದರಷ್ಟೇ ಸರಿಸಮಾನವಾಗಿದೆ.

ಕೆಎಸ್ಸಾರ್ಟಿಸಿಯಲ್ಲಿ ಪ್ರೀಮಿಯಂ ಹಾಗೂ ಪ್ರೀಮಿಯಂಯೇತರ ವಿಭಾಗವಾರು ಬಸ್ ಸಂಚಾರ ಆಗುತ್ತಿದೆ. ಪ್ರೀಮಿಯಂ ವಿಭಾಗದಲ್ಲಿ 760 ಬಸ್ ರಾಜ್ಯದ ವಿವಿಧ ಭಾಗಗಳಿಗೆ ಸಂಚರಿಸುತ್ತಿವೆ. ಪ್ರೀಮಿಯಂಯೇತರ ವಿಭಾಗದಲ್ಲಿ 7,366 ಬಸ್‍ಗಳು ಓಡಾಡುತ್ತಿವೆ. ಒಟ್ಟಾರೆ 8,126 ಬಸ್‍ಗಳು ಕೆಎಸ್ಸಾರ್ಟಿಸಿ ಅಡಿ ಸಂಚರಿಸುತ್ತಿವೆ.

ದಿನನಿತ್ಯ ಪ್ರೀಮಿಯಂಯೇತರ ಬಸ್‍ಗಳು 26,63,755 ಕಿ.ಮೀ. ಸಂಚಾರ ಮಾಡುತ್ತವೆ. ಪ್ರೀಮಿಯಂ ವಿಭಾಗದಲ್ಲಿ 1.71 ಕೋಟಿ ರೂ. ನಷ್ಟವಾದರೆ ಪ್ರೀಮಿಯಂಯೇತರ ವಿಭಾಗದಲ್ಲಿ 7.93 ಕೋಟಿ ರೂ. ನಷ್ಟವಾಗುತ್ತದೆ. ಇದಲ್ಲದೆ, ಬಸ್ ನಿಲ್ದಾಣದ ನಿರ್ವಹಣೆ, ಘಟಕ, ಬಸ್‍ಗಳ ಮೇಲ್ವಿಚಾರಣೆ, ಅಧಿಕಾರಿಗಳ ಓಡಾಟ ಇತರೆ ವೆಚ್ಚಗಳು ಇನ್ನಷ್ಟು ಹೆಚ್ಚಿವೆ. ಲಾಕ್‍ಡೌನ್ ಮಾ.24ರ ಮಧ್ಯರಾತ್ರಿಯಿಂದ ಜಾರಿಯಾಗಿದೆ. ಇಂದು 13ನೇ ದಿನಕ್ಕೆ ಮುಂದುವರಿದಿದೆ. ಇನ್ನೂ ಸರಿಯಾಗಿ 8 ದಿನ ಲಾಕ್‍ಡೌನ್ ಮುಂದುವರಿಯಲಿದ್ದು, ಸಂಸ್ಥೆ ಈಗಾಗಲೇ ಬಸ್ ಸಂಚಾರ ರದ್ಧತಿ, ಸಿಬ್ಬಂದಿ ವೇತನ, ಇತರೆ ನಷ್ಟ, ನಿಲ್ದಾಣ ನಿರ್ವಹಣೆ ಸೇರಿ ಒಟ್ಟು 152 ಕೋಟಿ ರೂ. ನಷ್ಟ ಅನುಭವಿಸಿದೆ.

ಒಟ್ಟಾರೆ ಲಾಕ್‍ಡೌನ್ ಅಂತ್ಯದ ವೇಳೆಗೆ 220 ರಿಂದ 250 ಕೋಟಿ ರೂ. ತಲುಪವರೆಗೂ ನಷ್ಟದ ಬಾಬ್ತು ತಲುಪುವ ನಿರೀಕ್ಷೆಯಿದೆ. ಕೆಎಸ್ಸಾರ್ಟಿಸಿ, ಬಿಎಂಟಿಸಿ ಎರಡು ಸಂಸ್ಥೆಗಳು ಕೆಲ ವರ್ಷ ಕೊಂಚ ಲಾಭದಲ್ಲಿದ್ದವು. ಆದರೆ, ವೋಲ್ವೋ ಬಸ್ ಖರೀದಿ, ಟಿಟಿಎಂಸಿಗಳ ನಿರ್ಮಾಣದಿಂದಾದ ನಷ್ಟದಿಂದ ಮತ್ತಷ್ಟು ಹೊಡೆತ ಬೀಳುವ ಸಾಧ್ಯತೆಯಿದೆ.

ಲಾಕ್‍ಡೌನ್‍ನಿಂದ ಮತ್ತೆ ಲಾಭಕ್ಕೆ ಬರಲು ವರ್ಷಗಳೇ ಕಳೆದಿರಬಹುದು. ಇಂತಹ ದೊಡ್ಡ ಮಟ್ಟದ ನಷ್ಟ ಇದುವರೆಗೂ ಆಗಿರಲಿಲ್ಲ. ಇಡೀ ದೇಶವೇ ಕೊರೋನ ಮಹಾಮಾರಿಯನ್ನು ದೇಶದಿಂದ ಹೊಡೆದೋಡಿಸಲು ಕಂಕಣಬದ್ಧವಾಗಿದೆ. ನಾವು ಕೈ ಜೋಡಿಸಲಿದ್ದೇವೆ. ಲಾಕ್‍ಡೌನ್ ಮುಗಿದ ಬಳಿಕ ಕೂಡಲೇ ಸಂಚಾರ ಆರಂಭಿಸುತ್ತೇವೆ. ಆದರೆ, ಮುಂದುವರಿಕೆ ಬಗ್ಗೆ ಯಾವುದೇ ಮಾಹಿತಿಯಿಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News