ಇಂದಿರಾ ಕ್ಯಾಂಟೀನ್‍ನಲ್ಲಿ ಊಟಕ್ಕೆ ದರ ನಿಗದಿ ವಿಚಾರ: ಸಿದ್ದರಾಮಯ್ಯ ಜೊತೆ ಸಿಎಂ ಬಿಎಸ್‍ವೈ ಚರ್ಚೆ

Update: 2020-04-06 18:14 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಎ.6: ಲಾಕ್‍ಡೌನ್ ಹಿನ್ನೆಲೆಯಲ್ಲಿ ಬಡವರಿಗೆ ಇಂದಿರಾ ಕ್ಯಾಂಟೀನ್‍ನಲ್ಲಿ ನೀಡುತ್ತಿದ್ದ ತಿಂಡಿ, ಊಟ ನಿಲ್ಲಿಸಿರುವ ವಿಷಯದ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಜೊತೆ ದೂರವಾಣಿ ಮೂಲಕ ಸೋಮವಾರ ಮತುಕತೆ ನಡೆಸಿದರು.

ಇಂದಿರಾ ಕ್ಯಾಂಟೀನ್‍ನಲ್ಲಿ ಉಚಿತ ಊಟ, ತಿಂಡಿ ನಿಲ್ಲಿಸಿ, ದರ ನಿಗದಿ ಮಾಡಿರುವ ಸಂಬಂಧ ಸಿದ್ದರಾಮಯ್ಯ, ಇತ್ತೀಚೆಗೆ ಮುಖ್ಯಮಂತ್ರಿಗೆ ಪತ್ರ ಬರೆದಿದ್ದರು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ದೂರವಾಣಿ ಕರೆ ಮಾಡಿ ಊಟ, ತಿಂಡಿಯನ್ನು ಉಚಿತವಾಗಿಯೆ ನೀಡಲಾಗುತ್ತಿತ್ತು. ಆದರೆ, ದುರುಪಯೋಗವಾದ ಕಾರಣ ದರ ನಿಗದಿ ಮಾಡಿರುವುದಾಗಿ ತಿಳಿಸಿದರು.

ದುರುಪಯೋಗವಾಗದಂತೆ ಊಟ, ತಿಂಡಿಯನ್ನು ಇಂದಿರಾ ಕ್ಯಾಂಟೀನ್ ಮೂಲಕ ಬಡವರಿಗೆ ಉಚಿತವಾಗಿ ನೀಡಿ. ದುರುಪಯೋಗಕ್ಕೆ ಅವಕಾಶ ಮಾಡಿಕೊಡುವ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಿ ಎಂದು ಮುಖ್ಯಮಂತ್ರಿಗೆ ಸಿದ್ದರಾಮಯ್ಯ ಹೇಳಿದರು. ಈ ಕುರಿತು ಪರಿಶೀಲನೆ ನಡೆಸುವುದಾಗಿ ಯಡಿಯೂರಪ್ಪ ತಿಳಿಸಿದರು.

ಲಾಕ್‍ಡೌನ್‍ನಿಂದ ರೈತರು, ಕೃಷಿ ಕೂಲಿ ಕಾರ್ಮಿಕರು, ಜೊತೆಗೆ ಹಲವಾರು ಕ್ಷೇತ್ರಗಳ ದುಡಿಯುವ ವರ್ಗದವರಿಗೆ ತೊಂದರೆಯಾಗಿದೆ. ಅವರ ನೆರವಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಸಿದ್ದರಾಮಯ್ಯ ಇದೇ ವೇಳೆ ಒತ್ತಾಯಿಸಿದರು.

ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಮುಖ್ಯಮಂತ್ರಿ, ಪ್ರತಿಪಕ್ಷಗಳ ಸಲಹೆ, ಸೂಚನೆಗಳನ್ನು ಗಮನದಲ್ಲಿಟ್ಟುಕೊಂಡು ಕಾರ್ಯಕ್ರಮ ರೂಪಿಸುವುದಾಗಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News