ಕೊರೋನ ವೈರಸ್ ಧರ್ಮ-ಜಾತಿಯಿಂದ ಹರಡುವುದಿಲ್ಲ: ಸಿ.ಎಂ.ಇಬ್ರಾಹಿಂ

Update: 2020-04-07 11:58 GMT

ಬೆಂಗಳೂರು, ಎ.7: ಕೊರೋನ ವೈರಸ್ ಯಾವುದೇ ನಿರ್ದಿಷ್ಟ ಜಾತಿ-ಧರ್ಮವನ್ನು ನೋಡಿ ಬರುವುದಿಲ್ಲ. ಹೀಗಾಗಿ, ಯಾರೂ ಒಂದೇ ಸಮುದಾಯದತ್ತ ಬೆರಳು ಮಾಡಿ ತೋರಿಸಬೇಡಿ ಎಂದು ಕಾಂಗ್ರೆಸ್ ಹಿರಿಯ ಮುಖಂಡ, ವಿಧಾನ ಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ ಹೇಳಿದ್ದಾರೆ.

ಮಂಗಳವಾರ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಇಂದು ಕೊರೋನ ವೈರಸ್ ಮಹಾಮಾರಿ ಇಡೀ ಜಗತ್ತನ್ನೇ ಕಾಡುತ್ತಿದೆ. ಲಾಕ್‍ಡೌನ್ ಆದೇಶವನ್ನು ನಾವೆಲ್ಲರೂ ಅನುಸರಿಸುತ್ತಿದ್ದೇವೆ. ನಮ್ಮ ಸಮುದಾಯದವರು ಯಾರೂ ಮಸೀದಿ ಕಡೆ ತಲೆ ಹಾಕುತ್ತಿಲ್ಲ. ಮನೆಗಳಲ್ಲೇ ನಮಾಝ್ ಮಾಡುತ್ತಿದ್ದೇವೆ. ಶೀಘ್ರದಲ್ಲಿಯೇ ಬರುವ ರಮಝಾನ್ ಹಬ್ಬವನ್ನೂ ನಾವು ಮನೆಯಲ್ಲೇ ಮಾಡಿಕೊಳ್ಳುತ್ತೇವೆ. ಇದನ್ನ ಸಿಎಂ ಸಭೆಯಲ್ಲೂ ತಿಳಿಸಿದ್ದೇವೆ. ಆದರೆ, ಕೊರೋನ ವೈರಸ್ ಮುಸ್ಲಿಮರಿಂದಲೇ ಹರಡುತ್ತಿದೆ ಎಂಬಂತೆ ಬಿಂಬಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. 

ಕೊರೋನ ಕೂಡ ಯಾವ ಜಾತಿ-ಧರ್ಮ ನೋಡಿ ಬರುತ್ತಿಲ್ಲ. ಇಂಗ್ಲೆಂಡ್ ಪ್ರಧಾನಿಗೂ ಸಾಕಷ್ಟು ನೋವು ನೀಡುತ್ತಿದೆ. ಅಮೆರಿಕಾದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಸೋಂಕಿಗೊಳಗಾಗಿದ್ದಾರೆ. ಎಲ್ಲಿಯೂ ಜಾತಿ ಧರ್ಮ ಅಂತ ಬೊಟ್ಟು ಮಾಡಿಲ್ಲ. ಆದರೆ, ನಮ್ಮ ರಾಜ್ಯದಲ್ಲಿ ಮಾತ್ರ ಒಂದೇ ಸಮುದಾಯದವರತ್ತ ಬೊಟ್ಟು ಮಾಡಲಾಗುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಸುಳ್ಳು ಸುದ್ದಿಗಳನ್ನ ಹರಡಲಾಗುತ್ತಿದೆ. ಇಂತಹ ಸುದ್ದಿಗಳಿಗೆ ಕಡಿವಾಣ ಹಾಕುವಂತೆ ಸರಕಾರಕ್ಕೆ ಸಿ.ಎಂ.ಇಬ್ರಾಹಿಂ ಅವರು ಮನವಿ ಮಾಡಿದರು. 

ಸರಕಾರಿ ನೌಕರರ ವೇತನವನ್ನು ಕಡಿತಗೊಳಿಸುವ ಬದಲು ಜನಪ್ರತಿನಿಧಿಗಳ ವೇತನವನ್ನು ಕಡಿತಗೊಳಿಸಲಿ. ಅಲ್ಲದೆ, ರಾಜ್ಯ ಸರಕಾರದ ಬಳಿಯೂ ಹಣವಿಲ್ಲವಾಗಿದ್ದು, ರಾಜ್ಯದ ಸಂಸದರು ಪಿಎಂ ಪರಿಹಾರ ನಿಧಿಗೆ ಹಣ ನೀಡುವ ಬದಲು ಆ ಹಣವನ್ನು ನಮ್ಮ ರಾಜ್ಯಕ್ಕೆ ನೀಡಬೇಕೆಂದು ತಿಳಿಸಿದರು.

ನಾವೆಲ್ಲರೂ ಒಂದೇ ತಾಯಿಯ ಮಕ್ಕಳಂತೆ ಇದ್ದೇವೆ. ಕಾರ್ಯಕರ್ತರೂ ಇದನ್ನು ಅರಿಯಬೇಕು. ಒಂದೇ ಸಮುದಾಯದತ್ತ ಆರೋಪ ಮಾಡುವುದನ್ನು ಬಿಟ್ಟು ಎಲ್ಲರೂ ಕೊರೋನ ಎಂಬ ಮಹಾಮಾರಿಯನ್ನು ಹೊಡೆದು ಓಡಿಸೋಣ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News