ಸಾವು ಎಲ್ಲದಕ್ಕೂ ಪರಿಹಾರವಲ್ಲ: ಕೃಷಿ ಸಚಿವ ಬಿ.ಸಿ.ಪಾಟೀಲ್

Update: 2020-04-07 12:33 GMT

ಬೆಂಗಳೂರು, ಎ. 7: ಸಾವು ಎಲ್ಲ ಸಮಸ್ಯೆಗಳಿಗೆ ಪರಿಹಾರವಲ್ಲ. ಬದುಕಿ ಸಾಧಿಸಬೇಕು. ಯಾವುದೇ ಕಾರಣಕ್ಕೂ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಬಾರದು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್, ರಾಜ್ಯದ ರೈತ ಸಮುದಾಯಕ್ಕೆ ಮನವಿ ಮಾಡಿದ್ದಾರೆ.

ಮಂಗಳವಾರ ಕೊರೋನ ವೈರಸ್ ಸೋಂಕಿನಿಂದ ಆಗಿರುವ ಲಾಕ್‍ಡೌನ್ ಹಿನ್ನೆಲೆಯಲ್ಲಿ ವಿಜಯಪುರ ಹಾಗೂ ಕಲಬುರಗಿಯಲ್ಲಿ ಜಿಲ್ಲಾಡಳಿತದೊಂದಿಗೆ ಪ್ರತ್ಯೇಕ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ಇತ್ತೀಚೆಗೆ ಆತ್ಮಹತ್ಯೆಗೆ ಶರಣಾದ ಕಲಬುರಗಿಯ ರೈತ ಚಂದ್ರಕಾಂತ್ ಬಿರಾದಾರ್ ಅವರ ನಿವಾಸಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿದರು. ಇದೇ ಸಂದರ್ಭದಲ್ಲಿ ರಾಜ್ಯ ಸರಕಾರದಿಂದ ರೈತನ ಕುಟುಂಬಕ್ಕೆ 5 ಲಕ್ಷ ರೂ.ಪರಿಹಾರದ ಚೆಕ್ ಹಾಗೂ ವೈಯಕ್ತಿಕವಾಗಿ 1ಲಕ್ಷ ರೂ.ಪರಿಹಾರ ನೀಡಿದರು.

ಅಲ್ಲದೆ, ವಿಧವಾ ವೇತನದ ಆದೇಶದ ಪ್ರತಿ, ಅಂತ್ಯ ಸಂಸ್ಕಾರಕ್ಕೆ 5 ಸಾವಿರ ರೂ.ಚೆಕ್ ನೀಡಿದರು. ಚಿಂತೆ ಮಾಡಿ ಏನೂ ಪ್ರಯೋಜನವಿಲ್ಲ. ರಾಜ್ಯ ಸರಕಾರ ನಿಮ್ಮ ನೆರವಿಗೆ ನಿಂತಿದೆ. ರೈತರು ಯಾವುದೇ ಸಂದರ್ಭದಲ್ಲಿಯೂ ಆತ್ಮಹತ್ಯೆಯಂತಹ ದುಡುಕಿನ ತೀರ್ಮಾನವನ್ನು ಕೈಗೊಳ್ಳಬಾರದು ಎಂದು ಇದೇ ವೇಳೆ ಬಿ.ಸಿ.ಪಾಟೀಲ್ ಮನವಿ ಮಾಡಿದರು.

ಕೊರೋನ ಸೋಂಕು ನಿಯಂತ್ರಣಕ್ಕಾಗಿ ಲಾಕ್‍ಡೌನ್ ಮಾಡಲಾಗಿದ್ದು, ಇದರಿಂದ ರಾಜ್ಯದ ರೈತರು ತಾವು ಬೆಳೆದ ಹಣ್ಣು-ತರಕಾರಿಗಳನ್ನು ಮಾರುಕಟ್ಟೆಗೆ ಸಾಗಿಸಲು ಸಂಕಷ್ಟವಾಗಿದೆ. ಇದನ್ನು ಗಮನಿಸಿ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸರಕಾರ ರೈತರ ಹಿತದೃಷ್ಟಿಯಿಂದ ಕೃಷಿ ಉತ್ಪನ್ನಗಳ ಸಾಗಾಣಿಕೆಗೆ ಮುಕ್ತ ಅವಕಾಶ ಕಲ್ಪಿಸಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಸೋಂಕು ನಿಯಂತ್ರಣಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಕೋರಿದರು.

ದಾಕ್ಷಿ ಮಾರಾಟಕ್ಕೆ ಆನ್‍ಲೈನ್ ವ್ಯವಸ್ಥೆ: ರೈತ ಸಮುದಾಯಕ್ಕೆ ಆಗುವ ತೊಂದರೆ ಇಡೀ ದೇಶಕ್ಕೆ ತೊಂದರೆಯಿದ್ದಂತೆ. ಹೀಗಾಗಿ ರೈತರ ಕೃಷಿ ಉತ್ಪನ್ನಗಳ ಸುಲಲಿತ ಮಾರಾಟಕ್ಕೆ ಸರಕಾರ ಅಂತರ್ ರಾಜ್ಯ ನಿರ್ಬಂಧವನ್ನು ಸಡಿಲಿಸಲಾಗಿದೆ ಎಂದ ಬಿ.ಸಿ. ಪಾಟೀಲ್, ಪರಿಸ್ಥಿತಿಯ ದುರ್ಲಾಭ ಪಡೆದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಇದೇ ಸಂದರ್ಭದಲ್ಲಿ ಎಚ್ಚರಿಕೆಯನ್ನು ನೀಡಿದರು.

ವಿಜಯಪುರ ಜಿ.ಪಂ. ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಬಿತ್ತನೆ ಬೀಜ ಮತ್ತು ರಸಗೊಬ್ಬರ ಪೂರೈಕೆಯಲ್ಲಿ ಯಾವುದೆ ವ್ಯತ್ಯಯ ಆಗದಂತೆ ಕ್ರಮ ಕೈಗೊಳ್ಳಬೇಕು. ಅಲ್ಲದೆ, ರೈತರ ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಸಾಗಿಸಲು ಕ್ರಮ ಕೈಗೊಳ್ಳಬೇಕು. ಅಲ್ಲದೆ, ಜಿಲ್ಲೆಯಲ್ಲಿ ಅತ್ಯಂತ ಹೆಚ್ಚು ಬೆಳೆಯುವ ದ್ರಾಕ್ಷಿ ಮಾರಾಟಕ್ಕೆ ಆನ್‍ಲೈನ್ ವ್ಯವಸ್ಥೆ ಕಲ್ಪಿಸಲು ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಸೂಚನೆ ನೀಡಿದರು.

ಕಲ್ಲಂಗಡಿ ಮತ್ತು ಸೌತೆಕಾಯಿ ತಿನ್ನುವುದರಿಂದ ರೋಗ ನಿರೋಧಕ ಶಕ್ತಿ ವೃದ್ಧಿಸುತ್ತದೆ ಎಂಬುದು ವೈದ್ಯರ ಹೇಳಿಕೆ. ಹೀಗಾಗಿ ಸಾರ್ವಜನಿಕರು ಯಾವುದೇ ಆತಂಕವಿಲ್ಲದೆ ಕಲ್ಲಂಗಡಿ ಹಣ್ಣು ಸೇವನೆ ಮಾಡಬಹುದು. ಕಲ್ಲಂಗಡಿ ಸೇವಿಸಿದರೆ ಕೊರೋನ ಸೋಂಕು ತಗುಲುತ್ತದೆ ಎಂಬುದರಲ್ಲಿ ಯಾವುದೆ ಸತ್ಯಾಂಶವಿಲ್ಲ ಎಂದ ಅವರು, ರೈತರ ಕೃಷಿ ಉತ್ಪನ್ನಗಳ ಮಾರಾಟಕ್ಕೆ ಅಡ್ಡಿಪಡಿಸಿದರೆ ಕಟ್ಟುನಿಟ್ಟಿನ ಕ್ರಮ ವಹಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ರಾಜ್ಯದಲ್ಲಿನ ಕೊರೋನ ವೈರಸ್ ಸೋಂಕಿನ ಹಾವಳಿ ಅದಷ್ಟು ಶೀಘ್ರದಲ್ಲೆ ಮುಕ್ತಾಯಗೊಳ್ಳಲಿದೆ. ಎಲ್ಲ ಜನರಿಗೆ ಎದುರಾಗಿರುವ ಸಾಮಾಜಿಕ ಕುತ್ತು ಬೇಗ ಕಳೆದುಹೋಗಲಿದೆ. ಜನರನ್ನು ಈ ಕಂಟಕದಿಂದ ಪಾರು ಮಾಡುವ ಕೆಲಸವನ್ನು ಸರಕಾರ ಮಾಡುತ್ತಿದೆ ಎಂದ ಅವರು, ಹಣ್ಣು ಮತ್ತು ತರಕಾರಿ ಉತ್ಪನ್ನಗಳನ್ನು ಗ್ರಾಹಕರಿಗೆ ಸುಲಭ ರೀತಿಯಲ್ಲಿ ದೊರಕಿಸಿಕೊಡಲು ಸರಕಾರ ಕ್ರಮ ಕೈಗೊಂಡಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News