ಸಮಾಜದಲ್ಲಿ ಶಾಂತಿ ಭಂಗ ಮಾಡಲು ಕಿಡಿಗೇಡಿಗಳ ಪ್ರಯತ್ನ: ಡಿ.ಕೆ.ಶಿವಕುಮಾರ್

Update: 2020-04-07 13:12 GMT

ಬೆಂಗಳೂರು, ಎ.7: ಸಾಮಾಜಿಕ ಮಾಧ್ಯಮಗಳ ದುರ್ಬಳಕೆ ಮಾಡಿಕೊಂಡು ಕೆಲವು ಕಿಡಿಗೇಡಿಗಳು ಒಂದು ಕೋಮಿನ ವಿರುದ್ಧ ಅಪಪ್ರಚಾರ ಮಾಡಿ, ಸಮಾಜದಲ್ಲಿ ಶಾಂತಿ ಭಂಗ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.

ಮಂಗಳವಾರ ನಗರದ ಕ್ವೀನ್ಸ್‍ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೆಲವು ಊರುಗಳಲ್ಲಿ ಈ ಸಮುದಾಯದವರನ್ನು ಗಡಿಪಾರು ಮಾಡುವ ಹಾಗೂ ಸಾಮಾಜಿಕವಾಗಿ ಬಹಿಷ್ಕಾರ ಹಾಕುವ ಮಟ್ಟಕ್ಕೆ ಸುಳ್ಳು ಸುದ್ದಿಗಳನ್ನು ಹಬ್ಬಿಸಲಾಗುತ್ತಿದೆ ಎಂದು ದೂರಿದರು.

ಈ ವಿಚಾರವಾಗಿ ನಿನ್ನೆ ಮುಖ್ಯಮಂತ್ರಿ ಮಾಧ್ಯಮಗಳಿಗೆ ನೀಡಿರುವ ಹೇಳಿಕೆಯನ್ನು ನಾನು ಅಭಿನಂದಿಸುತ್ತೇನೆ. ಅವರ ಹೇಳಿಕೆ ಕೇವಲ ಮಾತಿಗೆ ಮಾತ್ರ ಸೀಮಿತವಾಗಬಾರದು. ಅದು ಗ್ರಾಮ ಪಂಚಾಯಿತಿ ಮಟ್ಟಕ್ಕೂ ತಲುಪಬೇಕು. ಮುಖ್ಯಮಂತ್ರಿ ಹಾಗೂ ಅವರ ಪಕ್ಷದ ಹೆಸರು ಹೇಳಿಕೊಂಡೆ ಈ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಶಿವಕುಮಾರ್ ತಿಳಿಸಿದರು.

ಸರಕಾರ ಸೈಬರ್ ಕ್ರೈಮ್ ವಿಭಾಗವನ್ನು ಬಳಸಿಕೊಂಡು ಈ ರೀತಿ ಅಪಪ್ರಚಾರ ಮಾಡುತ್ತಿರುವವರನ್ನು ಪತ್ತೆ ಹಚ್ಚಬೇಕಿದೆ. ಇದರ ಜೊತೆಗೆ ಈ ಕೃತ್ಯ ಮಾಡಿದವರನ್ನು ಬಂಧಿಸಿ ಜೈಲಿಗೆ ಹಾಕಬೇಕು. ಈ ವಿಚಾರವಾಗಿ ಇಂದು ಸಂಜೆಯೊಳಗಾಗಿ ಮುಖ್ಯಮಂತ್ರಿ ಸೂಚನೆ ಹೊರಡಿಸಬೇಕು ಎಂದು ಅವರು ಒತ್ತಾಯಿಸಿದರು.

'ಸರಕಾರಿ ನೌಕರರ ವೇತನ ಕಡಿತಗೊಳಿಸಬೇಡಿ'
ಎ.14ರ ನಂತರ ಲಾಕ್‍ಡೌನ್ ಮುಂದುವರೆದರೆ ಸರಕಾರಿ ನೌಕರರ ವೇತನ ಕಡಿತಗೊಳಿಸುವ ವಿಚಾರವಾಗಿ ಮುಖ್ಯಮಂತ್ರಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಸರಕಾರ ಯಾವುದೆ ಕಾರಣಕ್ಕೂ ಎಲ್ಲ ಇಲಾಖೆಗಳ ಸಿಬ್ಬಂದಿ ವೇತನ ಕಡಿತ ಮಾಡಬಾರದು. ಸರಕಾರಿ ಸಿಬ್ಬಂದಿಗಳಿಗೆ ಸಂಬಳ ನೀಡದಿರುವಷ್ಟರ ಮಟ್ಟಿಗೆ ಸರಕಾರಕ್ಕೆ ದಾರಿದ್ರ್ಯ ಬಂದಿಲ್ಲ. ಅವರಿಗೆ ಕೆಲಸ ಮಾಡಬೇಡಿ ಎಂದು ನಾವು ಹೇಳಿದ್ದೇವೆ. ಹೀಗಾಗಿ ಅವರ ಸಂಬಳ ನೀಡದಿರುವುದು ಸರಿಯಲ್ಲ ಎಂದು ಶಿವಕುಮಾರ್ ಹೇಳಿದರು.

ಅವರು ಮನೆಯಲ್ಲೆ ಇದ್ದರೂ ಅವರಿಗೆ ಮನೆ ಬಾಡಿಗೆ, ಇಎಂಐ, ಸಾಲದ ಬಡ್ಡಿ ಸೇರಿದಂತೆ ಅನೇಕ ಖರ್ಚುಗಳಿವೆ. ಈಗಾಗಲೆ ನಾವು ಹೇಳಿರುವಂತೆ ಸರಕಾರ ಬೇಕಾದರೆ ಕೆಲವು ಯೋಜನೆಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಲಿ. ಆ ದುಡ್ಡನ್ನು ಈ ಕಾರ್ಯಕ್ಕೆ ಬಳಸಿಕೊಳ್ಳಲಿ. ಸದ್ಯ ಜನರು ನೆಮ್ಮದಿಯಾಗಿ ಉಸಿರಾಡಿ ಜೀವನ ನಡೆಸುವಂತೆ ಮಾಡುವುದು ಮುಖ್ಯ ಎಂದು ಅವರು ತಿಳಿಸಿದರು.

'ಗ್ರಾಮೀಣಾಭಿವೃದ್ಧಿ ಸಚಿವರು ಎಲ್ಲಿದ್ದಾರೆ?'
ರಾಜ್ಯದಲ್ಲಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‍ರಾಜ್ ಇಲಾಖೆ ಮಲಗಿದೆ. ಈ ಇಲಾಖೆ ಸಚಿವರು ಎಲ್ಲಿದ್ದಾರೊ ಗೊತ್ತಿಲ್ಲ. ಬೇಸಿಗೆ ಆರಂಭವಾಗಿದ್ದು, ಬರ ಎದುರಾಗುವ ಪರಿಸ್ಥಿತಿ ಇದೆ. ಈ ಹಂತದಲ್ಲಿ ಹಳ್ಳಿಗಳಲ್ಲಿ ಜನರಿಗೆ ಆರೋಗ್ಯಕರ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕಿದೆ. ಇನ್ನು ನರೇಗಾ ಉದ್ಯೋಗ ಖಾತ್ರಿ ಯೋಜನೆ ಮುಂದುವರೆಸಿ ದಿನಕ್ಕೆ 275 ರೂ. ನೀಡುವುದಾಗಿ ಪ್ರಧಾನಿ ಹೇಳಿದ್ದಾರೆ. ಪ್ರತಿಯೊಬ್ಬ ಕಾರ್ಮಿಕನಿಗೆ ತಿಂಗಳಿಗೆ 8-9 ಸಾವಿರ ರೂ.ನೀಡಲು ಹಾಗೂ ಒಂದು ಪಂಚಾಯಿತಿ 4-5 ಕೋಟಿ ಖರ್ಚು ಮಾಡಲು ಅವಕಾಶವಿದೆ ಎಂದು ಶಿವಕುಮಾರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News