ಚಿಕ್ಕಮಗಳೂರು: ಅಲ್ಲಲ್ಲಿ ಮುಂದುವರಿದ ಮಳೆ

Update: 2020-04-07 13:26 GMT

ಚಿಕ್ಕಮಗಳೂರು, ಎ.7: ಕಾಫಿನಾಡಿನಲ್ಲಿ ಲಾಕ್‍ಡೌನ್‍ನಿಂದ ಜನಜೀವನ ಅಸ್ತವ್ಯಸ್ತವಾಗಿರುವುದು ಒಂದೆಡೆಯಾಗಿದ್ದರೆ, ಕಳೆದ ಮೂರು ದಿನಗಳಿಂದ ಜಿಲ್ಲೆಯ ವಿವಿಧೆಡೆ ಧಾರಾಕಾರ ಮಳೆ ಸುರಿಯುತ್ತಿರುವುದು ಸಾರ್ವಜನಿಕರೂ ಸೇರಿದಂತೆ ಕಾಫಿ, ಅಡಿಕೆ ಬೆಳೆಗಾರರು ಹಾಗೂ ರೈತರಲ್ಲಿ ಮಂದಹಾಸಕ್ಕೆ ಕಾರಣವಾಗಿದೆ.

ರವಿವಾರ ಜಿಲ್ಲೆಯ ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆಯಾಗಿದ್ದು, ಮೂಡಿಗೆರೆ, ಶೃಂಗೇರಿ, ನರಸಿಂಹರಾಜಪುರ, ಕೊಪ್ಪ ತಾಲೂಕುಗಳ ವ್ಯಾಪ್ತಿಯಲ್ಲಿ ಗಡುಗು, ಗಾಳಿ ಸಹಿತ ಮಳೆ ಸುರಿದಿತ್ತು. ಆದರೆ ಚಿಕ್ಕಮಗಳೂರು, ಕಡೂರು, ತರೀಕೆರೆ ತಾಲೂಕುಗಳ ವ್ಯಾಪ್ತಿಯಲ್ಲಿ ಮೋಡ ಕವಿದ ವಾತಾವರಣ ಮಾತ್ರ ಇದ್ದು, ಮಳೆಯ ಸಿಂಚನವಾಗಿಲ್ಲ. ಸೋಮವಾರ ಚಿಕ್ಕಮಗಳೂರು ತಾಲೂಕು ಸೇರಿದಂತೆ ಕಡೂರು, ತರೀಕೆರೆ ತಾಲೂಕುಗಳ ವ್ಯಾಪ್ತಿಯ ಅಲ್ಲಲ್ಲಿ ಮಳೆಯಾಗಿದೆ. ಮಂಗಳವಾರ ಮಲೆನಾಡು ಭಾಗದಲ್ಲಿ ಮತ್ತೆ ಮಳೆಯಾಗಿದ್ದು, ಜಿಲ್ಲೆಯ ಬಯಲು ಭಾಗದ ತಾಲೂಕುಗಳ ವ್ಯಾಪ್ತಿಯಲ್ಲಿ ಅಲ್ಲಲ್ಲಿ ತುಂತುರು ಮಳೆಯಾದ ಬಗ್ಗೆ ವರದಿಯಾಗಿದೆ.

ಕೊರೋನ ವೈರಸ್ ಸೋಂಕಿನ ಭೀತಿಯಿಂದಾಗಿ ಜಿಲ್ಲಾದ್ಯಂತ ಸದ್ಯ ಲಾಕ್‍ಡೌನ್ ಜಾರಿಯಲ್ಲಿದ್ದು, ಜನರು ಮನೆಗಳಿಂದ ಹೊರಬಾರದಂತಾಗಿ ತೀವ್ರ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ಜನರು ಬಿಸಿಲಿನ ತಾಪದಿಂದಾಗಿ ಹೈರಾಣಿಗಿದ್ದರು, ಕಾಫಿ, ಅಡಿಕೆ ತೋಟಗಳ ಮಾಲಕರು ಬಿಸಿಲಿನಿಂದಾಗಿ ತೋಟಗಳು ನೀರಿಲ್ಲದೇ ಒಣಗಿ ಹೋಗುವ ಭೀತಿಯಿಂದ ಡೀಸೆಲ್ ಮೋಟರ್‍ಗಳನ್ನು ಬಳಸಿ ಲಕ್ಷಾಂತರ ರೂ. ಖರ್ಚು ಮಾಡಿ ಹಳ್ಳಕೊಳ್ಳ, ಕೆರೆ ಕಾಲುವೆಗಳಲ್ಲಿ ಲಭ್ಯ ಇರುವ ನೀರನ್ನು ತೋಟಗಳಿಗೆ ಹರಿಸುತ್ತಿದ್ದರು.ಸದ್ಯ ಮಳೆ ಸುರಿಯಲಾರಂಭಿಸಿರುವುದರಿಂದ ಕಾಫಿ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡುವಂತಾಗಿದೆ.

ಮಂಗಳವಾರ ಮಲೆನಾಡು ಭಾಗದ ಮೂಡಿಗೆರೆ, ಕೊಟ್ಟಿಗೆಹಾರ, ಬಾಳೆಹೊನ್ನೂರು, ಬಾಳೆಹೊಳೆ, ಕಳಸ, ಮಾಗುಂಡಿ, ಬಸರಿಕಟ್ಟೆ, ಕೊಪ್ಪ, ಜಯಪುರ, ಶೃಂಗೇರಿ ಭಾಗದಲ್ಲಿ ಗುಡುಗು, ಮಿಂಚು, ಗಾಳಿ ಸಹಿತ ಧಾರಾಕಾರವಾಗಿ ಮಳೆ ಸುರಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News