ಮದ್ಯ ಮಾರಾಟಕ್ಕೆ ಅನುಮತಿ ಕೋರಿ ಅರ್ಜಿ: ವೈದ್ಯರಿಗೆ 10 ಸಾವಿರ ರೂ.ದಂಡ ವಿಧಿಸಿದ ಹೈಕೋರ್ಟ್

Update: 2020-04-07 13:17 GMT

ಬೆಂಗಳೂರು, ಎ.7: ಕೊರೋನ ಸೋಂಕು ಹರಡದಂತೆ ನಿಯಂತ್ರಣ ಮಾಡಲು ಲಾಕ್‍ಡೌನ್ ಘೋಷಿಸಲಾಗಿದೆ. ಈ ವೇಳೆಯಲ್ಲಿ ಮದ್ಯ ಮಾರಾಟಕ್ಕೆ ಅನುಮತಿ ನೀಡಬೇಕೆಂದು ಕೋರಿ ಅರ್ಜಿ ಸಲ್ಲಿಸಿದ್ದ ವೈದ್ಯರಿಗೆ ಹೈಕೋರ್ಟ್ 10 ಸಾವಿರ ರೂ.ದಂಡ ವಿಧಿಸಿದೆ.  

ಲಾಕ್‍ಡೌನ್ ವೇಳೆ ಮದ್ಯ ಮಾರಾಟಕ್ಕೆ ಅನುಮತಿ ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಮತ್ತು ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರಿದ್ದ ವಿಭಾಗೀಯ ನ್ಯಾಯಪೀಠ, ಹುಬ್ಬಳ್ಳಿಯ ವೈದ್ಯರಿಗೆ  10 ಸಾವಿರ ರೂ.ದಂಡ ವಿಧಿಸಿ ಆದೇಶ ಹೊರಡಿಸಿದೆ.

ಕೊರೋನ ವೈರಸ್ ಸೋಂಕು ಹರಡುತ್ತಿರುವ ಈ ವೇಳೆಯಲ್ಲಿ ಆಹಾರ, ಚಿಕಿತ್ಸೆ ಇತ್ಯಾದಿಗಳ ಬಗ್ಗೆ ಆದ್ಯತೆ ನೀಡಬೇಕು. ವೈದ್ಯರಾಗಿ ಮದ್ಯದ ಬಗ್ಗೆ ಕಾಳಜಿ ತೋರಿದ್ದಕ್ಕೆ ನ್ಯಾಯಪೀಠವು ಅಸಮಾಧಾನ ವ್ಯಕ್ತಪಡಿಸಿದೆ. ಅಲ್ಲದೆ, 10 ಸಾವಿರ ರೂ.ಹಣವನ್ನು ಸಿಎಂ ಪರಿಹಾರ ನಿಧಿಗೆ ನೀಡಲು ಅರ್ಜಿದಾರರಿಗೆ ಸೂಚನೆ ನೀಡಿದೆ. 

ಹುಬ್ಬಳ್ಳಿಯ ಮನೋವೈದ್ಯ ಡಾ.ವಿನೋದ್ ಕುಲಕರ್ಣಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಜಾಗೊಳಿಸಲಾಗಿದೆ.   

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News