​ಕೊರೋನ ವೈರಸ್ಸಿನಷ್ಟೆ ಕೋಮು ವೈರಸ್ಸು ಅಪಾಯಕಾರಿ: ಮಹಮ್ಮದೀಯರ ಕನ್ನಡ ವೇದಿಕೆ

Update: 2020-04-07 13:33 GMT

ಬೆಂಗಳೂರು, ಎ.7: ಕೊರೋನ ಸೋಂಕಿನ ವಿರುದ್ಧ ಜಾತಿ, ಧರ್ಮದ ಭೇದ, ಭಾವ ಮರೆತು ಒಗ್ಗಟ್ಟಿನಿಂದ ಹೋರಾಡಬೇಕಿದೆ. ಇಂತಹ ಸಂಕಷ್ಟ ಕಾಲದಲ್ಲಿ ಕೊರೋನ ಸೋಂಕಿನ ಮಹಾಮಾರಿಗೂ ಕೋಮುದಳ್ಳುರಿ ಬಣ್ಣ ಕಟ್ಟಿ ಕೆಲವು ವಿಕೃತರು ಇದರ ಲಾಭ ಪಡೆಯಲು ಹೊರಟಿರುವುದು ದುರದೃಷ್ಟಕರ ಎಂದು ಅಖಿಲ ಕರ್ನಾಟಕ ಮಹಮ್ಮದೀಯರ ಕನ್ನಡ ವೇದಿಕೆಯ ರಾಜ್ಯಾಧ್ಯಕ್ಷ ಸಮೀವುಲ್ಲಾ ಖಾನ್ ಹೇಳಿದ್ದಾರೆ.

ಹಿಂದೂ, ಮುಸ್ಲಿಮ್ ಐಕ್ಯತೆಯಿಂದ ಶಕ್ತಿಯುತವಾಗಿರುವ ಭಾರತದಲ್ಲಿ ವೈರಸ್ಸಿಗೂ ಜಾತಿಯ ಸೋಂಕು ಹಚ್ಚಿರುವುದು ಅತ್ಯಂತ ವಿಷಾದಕರ. ಕೊರೋನ ವೈರಸ್ಸಿನಷ್ಟೆ, ಕೋಮು ವೈರಸ್ಸು ಅಪಾಯಕಾರಿ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕಿದೆ ಎಂದು ಅವರು ಹೇಳಿದ್ದಾರೆ.

ದಿಲ್ಲಿಯ ತಬ್ಲೀಗ್ ಜಮಾಅತ್‍ನ ಧರ್ಮ ಸಭೆಗೂ ಮುನ್ನವೆ ಕೊರೋನ ಸೋಂಕು ಇತ್ತು. ಹಾಗಾಗಿ ಭಾರತಕ್ಕೆ ಕೊರೋನ ನುಸುಳಲು ಮುಸ್ಲಿಮ್ ಸಮುದಾಯ ಕಾರಣವಲ್ಲ. ಕೊರೋನ ವೈರಸ್ ಹಬ್ಬಲು ದಿಲ್ಲಿಯಲ್ಲಿ ನಡೆದ ತಬ್ಲೀಗ್ ಸಭೆಯೆ ಕಾರಣವೆಂದು ಸರಕಾರ ಇಲ್ಲವೆ ಸಂಬಂಧಪಟ್ಟ ಆಡಳಿತ ವ್ಯವಸ್ಥೆ ನಿರೂಪಿಸುವುದಾದರೆ ಅಂತಹ ವ್ಯಕ್ತಿಗಳ ಮೇಲೆ ಕ್ರಮ ಜರುಗಿಸಲು ಯಾರ ಅಭ್ಯಂತರವೂ ಇಲ್ಲ ಎಂದು ಅವರು ತಿಳಿಸಿದ್ದಾರೆ.

ಆದರೆ, ದಿಲ್ಲಿ ತಬ್ಲೀಗ್ ಧರ್ಮ ಸಭೆಯನ್ನೆ ಮುಂದಿಟ್ಟುಕೊಂಡು ಇಡೀ ಮುಸ್ಲಿಮ್ ಸಮುದಾಯವನ್ನು ಅನುಮಾನಿಸುವ, ಅಪಮಾನಿಸುವ ಮನಸ್ಥಿತಿಯನ್ನು ಮಹಮ್ಮದೀಯರ ಕನ್ನಡ ವೇದಿಕೆ ಬಲವಾಗಿ ಖಂಡಿಸುತ್ತದೆ ಎಂದು ಸಮೀವುಲ್ಲಾ ಖಾನ್ ಪ್ರತಿಪಾದಿಸಿದ್ದಾರೆ.

ತಬ್ಲೀಗ್ ಜಮಾಅತ್ ಧರ್ಮ ಸಭೆಗೆ ಆಗಮಿಸಿದ್ದ ವಿದೇಶಿ ವ್ಯಕ್ತಿಗಳಿಂದ ಕೊರೋನ ಹಬ್ಬಿರುವುದು ಒಂದು ಪ್ರತ್ಯೇಕ ಪ್ರಕರಣವೆ ಹೊರತು, ಕೋಟ್ಯಂತರ ಮುಸ್ಲಿಮರ ಸೂಫಿ ಸಂತರ ಮಾರ್ಗದಲ್ಲಿ ಸರ್ವಧರ್ಮ ಸಾಮರಸ್ಯದಲ್ಲಿ ಬಲವಾಗಿ ನಂಬಿಕೆ ಇಟ್ಟು ಸಹಬಾಳ್ವೆಯ ಬದುಕು ನಡೆಸುತ್ತಿರುವುದು ಈಗಲೂ ಭಾರತದಲ್ಲಿ ಕಂಡುಬರುವ ಸಾಮಾನ್ಯ ದೃಶ್ಯವಾಗಿದೆ. ಜಾತಿ, ಧರ್ಮವನ್ನು ಮೀರಿದ ಸಹಬಾಳ್ವೆಯಿಂದ ಮುಸ್ಲಿಮ್ ಸಮುದಾಯ ದೇಶ ಕಟ್ಟುವ ಕಾಯಕದಲ್ಲಿ ನಿರತವಾಗಿದೆ ಎಂದು ಅವರು ತಿಳಿಸಿದ್ದಾರೆ.

ಮುಸ್ಲಿಮ್ ಸಮುದಾಯವು ಪರಿಸ್ಥಿತಿಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕಿದೆ. ಇದು ಅತ್ಯಂತ ಸಂಕಷ್ಟದ ಪರಿಸ್ಥಿತಿ. ಇಂತಹ ಸಂದರ್ಭದಲ್ಲಿ ಮೌಢ್ಯದಿಂದ ಹೊರಬಂದು, ತಮ್ಮನ್ನು, ತಮ್ಮ ಕುಟುಂಬವನ್ನು ಮತ್ತು ದೇಶವನ್ನು ರಕ್ಷಿಸುವ ಕಾರ್ಯದಲ್ಲಿ ಈ ದೇಶವಾಸಿಗಳಾಗಿ ಎಲ್ಲರೊಂದಿಗೆ ಕೈ ಜೋಡಿಸಬೇಕಿದೆ ಎಂದು ಅವರು ಪ್ರಕಟಣೆಯಲ್ಲಿ ಕರೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News