ಕೊರೋನ ವೈರಸ್ ಸೋಂಕು: ರಾಜ್ಯದಲ್ಲಿ ರಕ್ತದ ಕೊರತೆ

Update: 2020-04-07 15:20 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಎ. 7: ಕೊರೋನ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ರೋಗ ಹರಡದಂತೆ ಸೂಕ್ತ ಮುನ್ನಚ್ಚರಿಕೆ ಕ್ರಮಗಳನ್ನು ಕೈಗೊಂಡು ಆರೋಗ್ಯವಂತ ರಕ್ತದಾನಿಗಳಿಂದ ರಕ್ತ ಸಂಗ್ರಹಿಸಬೇಕು ಎಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸೂಚನೆ ನೀಡಿದೆ.

ಕರ್ನಾಟಕ ರೆಡ್ ಕ್ರಾಸ್ ರಕ್ತ ನಿಧಿಯು ಮಾಸಿಕ 3,500 ಯೂನಿಟ್‍ಗಳಿಗಿಂತ ಹೆಚ್ಚು ರಕ್ತ ಸಂಗ್ರಹಿಸುತ್ತಿದ್ದು, ರಕ್ತಹೀನತೆ, ಗರ್ಭಿಣಿ ಮಹಿಳೆಯರಿಗೆ, ತಲ್ಸೆಮಿಯಾ, ಅನಿಮಿಯಾ, ಡಯಾಲಿಸಿಸ್, ಕ್ಯಾನ್ಸರ್, ತುರ್ತು ಶಸ್ತ್ರ ಚಿಕಿತ್ಸೆ ಮತ್ತಿತರ ರೋಗಿಗಳಿಗೆ ಸುಮಾರು 5 ಸಾವಿರ ಯೂನಿಟ್‍ಗಳಿಗಿಂತ ಹೆಚ್ಚು ಬೆಂಗಳೂರಿನ ಸರಕಾರಿ ಮತ್ತು ಸರಕಾರೇತರ ಆಸ್ಪತ್ರೆಗಳಿಗೆ ಹೊರಜಿಲ್ಲೆಗಳ ರಕ್ತ ಸಂಗ್ರಹಣ ಘಟಕಗಳಿಗೆ ವಿತರಿಸಲಾಗುತ್ತಿತ್ತು. ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ರಕ್ತದಾನ ಬಹುತೇಕ ಸ್ಥಗಿತಗೊಂಡಿದ್ದು ತಮ್ಮ ರಕ್ತನಿಧಿಯಲ್ಲದೆ, ರಾಜ್ಯದ ಬಹುತೇಕ ರಕ್ತನಿಧಿ ಕೇಂದ್ರಗಳೆಲ್ಲವೂ ರಕ್ತ ಸಂಗ್ರಹ ಕೊರತೆ ಎದುರುಸುತ್ತಿವೆ.

ರಕ್ತಕ್ಕೆ ಯಾವುದೇ ಪರ್ಯಾಯ ಇರುವುದಿಲ್ಲ. ಈ ರಕ್ತದ ಅವಶ್ಯಕತೆ ಪೂರೈಸಲು ರಕ್ತದಾನಿಗಳಿಂದ ಮಾತ್ರ ಸಾಧ್ಯ. ಹೀಗಾಗಿ ತಿಂಗಳಿಗೆ 3,500 ಯೂನಿಟ್‍ಗಳಿಗಿಂತ ಹೆಚ್ಚು ರಕ್ತ ಸಂಗ್ರಹ ಅನಿವಾರ್ಯವಾಗಿರುತ್ತದೆ. ಪ್ರಸ್ತುತ ಕರ್ನಾಟಕ ರೆಡ್ ಕ್ರಾಸ್  ರಕ್ತನಿಧಿ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ರಾಜ್ಯ ಶಾಖೆ ಬೆಂಗಳೂರು ರಕ್ತನಿಧಿಯಲ್ಲಿ ಕೇವಲ 50 ರಕ್ತದ ಯೂನಿಟ್‍ಗಳು ಮಾತ್ರವೇ ಇದ್ದು, ರಕ್ತನಿಧಿಯಲ್ಲಿ ರಕ್ತದ ಅಭಾವವು ಹೆಚ್ಚಾಗಿದೆ. ಪ್ರತಿದಿನವೂ ನೂರು ಯೂನಿಟ್‍ಗಿಂತ ಹೆಚ್ಚು ರಕ್ತದ ಬೇಡಿಕೆ ಇರುತ್ತದೆ. ಈ ಕೊರತೆ ಸರಿಪಡಿಸಲು ಸ್ವಯಂ ಪ್ರೇರಿತವಾಗಿ ರಕ್ತದಾನಿಗಳ ರಕ್ತದಾನ ಮಾಡಲು ಮುಂದಾಗಬೇಕೆಂದು ರೆಡ್ ಕ್ರಾಸ್ ಸಂಸ್ಥೆ ಮನವಿ ಮಾಡಿದೆ.

ಸ್ವಯಂ ಪ್ರೇರಿತ ರಕ್ತದಾನ ಮಾಡಲಿಚ್ಛಿಸುವ ದಾನಿಗಳು ಕರ್ನಾಟಕ ರೆಡ್ ಕ್ರಾಸ್ ರಕ್ತನಿಧಿ, ನಂ.26, ರೆಡ್ ಕ್ರಾಸ್ ಭವನ, ಮೊದಲನೆ ಮಹಡಿ, ರೆಸ್‍ಕೋರ್ಸ್ ರಸ್ತೆ, ಬೆಂಗಳೂರು-001 ಇಲ್ಲಿಗೆ ಬೆಳಗ್ಗೆ 9ರಿಂದ ಸಂಜೆ 6ಗಂಟೆಯ ವರೆಗೆ ಭೇಟಿ ನೀಡಬಹುದು. ಲಾಕ್‍ಡೌನ್ ಹಿನ್ನೆಲೆಯಲ್ಲಿ ರಕ್ತದಾನಕ್ಕೆ ಬರುವವರಿಗೆ ಪಾಸ್ ನೀಡಲಾಗುವುದು. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 9035068435, 9902859859, 9980537678 ಸಂಪರ್ಕಿಸಲು ಪ್ರಕಟಣೆ ಕೋರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News