ಗಂಗಮ್ಮ ಪ್ರಕರಣ ವಲಸೆ ಕಾರ್ಮಿಕರ ಬದುಕು ಸಾಕ್ಷೀಕರಿಸುವಂತಿದೆ: ಎಚ್.ಡಿ.ಕುಮಾರಸ್ವಾಮಿ

Update: 2020-04-07 17:54 GMT

ಬೆಂಗಳೂರು, ಎ.7: ಹುಟ್ಟೂರು ಸೇರಬೇಕೆಂಬ ಆಸೆಯೊಂದಿಗೆ ಹಸಿವಿನಲ್ಲೆ ರಾಯಚೂರಿನತ್ತ ಹೆಜ್ಜೆ ಹಾಕುತ್ತಿದ್ದ ಕಟ್ಟಡ ಕಾರ್ಮಿಕ ಮಹಿಳೆ ಗಂಗಮ್ಮ ಎಂಬವರು ಮಾರ್ಗಮಧ್ಯೆ ಅನ್ನಾಹಾರವಿಲ್ಲದೆ, ಸಕಾಲಕ್ಕೆ ಚಿಕಿತ್ಸೆ ಸಿಗದೆ ಮೃತಪಟ್ಟರೆಂಬ ಸುದ್ದಿ ತೀವ್ರ ನೋವುಂಟು ಮಾಡಿತು. ಗಂಗಮ್ಮ ಅವರ ಈ ಪ್ರಕರಣ ವಲಸೆ ಕಾರ್ಮಿಕರು, ಕೂಲಿ ಕಾರ್ಮಿಕರ ಬದುಕನ್ನು ಸಾಕ್ಷೀಕರಿಸುವಂತಿದೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ಈ ಸಂಬಂಧ ಸರಣಿ ಟ್ವೀಟ್‍ಗಳನ್ನು ಮಾಡಿರುವ ಅವರು, ಗಂಗಮ್ಮ ಪ್ರಕರಣದಲ್ಲಿ ಕೂಲಿ ನೀಡದ ಗುತ್ತಿಗೆದಾರನೊಬ್ಬನದ್ದೆ ತಪ್ಪಿಲ್ಲ. ಸರಕಾರದ್ದೂ ತಪ್ಪಿದೆ. ಕಾರ್ಮಿಕ ಇಲಾಖೆಯಲ್ಲಿ 8 ಸಾವಿರ ಕೋಟಿ ರೂ.ಹಣವಿದೆ. ಆದರೆ, ಇಂಥವರಿಗೆ ವಿನಿಯೋಗವಾಗುತ್ತಿಲ್ಲವೇಕೆ? ಆಕೆಯನ್ನು ಬಳ್ಳಾರಿ ಜಿಲ್ಲಾಡಳಿತ ನಿರಾಶ್ರಿತರ ಕ್ಯಾಂಪ್‍ನಲ್ಲಿ ಇರಿಸಿತ್ತಂತೆ. ಕ್ಯಾಂಪ್‍ನಲ್ಲಿದ್ದೂ ಆಕೆಗೆ ಆಹಾರ, ಚಿಕಿತ್ಸೆ ಸಿಗಲಿಲ್ಲ ಏಕೆ? ಎಂದು ಪ್ರಶ್ನಿಸಿದ್ದಾರೆ.

ಲಾಕ್‍ಡೌನ್ ಮಧ್ಯಮ ವರ್ಗ ಮತ್ತು ಶ್ರೀಮಂತರನ್ನು ಮನೆಯಲ್ಲಿ ಬಂಧಿಸಿಟ್ಟಿರಬಹುದು. ಆದರೆ, ಕೂಲಿ ಕಾರ್ಮಿಕರನ್ನು ವಲಸಿಗರನ್ನು ಬೀದಿಗೆ ತಳ್ಳಿದೆ. ಸರಕಾರ ಕೂಡಲೆ ಇಂಥವರ ಕಡೆಗೂ ಗಮನ ಹರಿಸಬೇಕು. ದೂರದೂರುಗಳಿಗೆ ಹೆಜ್ಜೆ ಹಾಕಿರುವವರ ಬದುಕು ಬವಣೆಯನ್ನು ನೋಡಬೇಕು. ಮೃತ ಗಂಗಮ್ಮನ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

ವಿದೇಶದಿಂದ ಬಂದ ಸೋಂಕು ಅತ್ತ ಸಾವಿರಾರು ಸಂಖ್ಯೆಯಲ್ಲಿ ಜನರನ್ನು ಭಾದಿಸುತ್ತಿದೆ. ಇತ್ತ, ದೇಶದ ಅಭಿವೃದ್ಧಿಗೆ ಹೆಗಲಾದವರು, ದೇಶ ಕಟ್ಟಿದವರು, ಕಟ್ಟುವ ಕೆಲಸಕ್ಕೆ ಮಣ್ಣು, ಕಲ್ಲು, ಇಟ್ಟಿಗೆ ಹೊತ್ತವರು ತಾವು ಮಾಡದ ತಪ್ಪಿಗೆ ಅನ್ನಾಹಾರಗಳಿಲ್ಲದೆ ಸಾವಿಗೆ ಶರಣಾಗುತ್ತಿರುವುದು ವಿಧಿಯ ಕ್ರೂರ ವ್ಯಂಗ್ಯ ಎಂದು ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News