ಮಂಗಳೂರಿನಿಂದ ದಾವಣಗೆರೆಗೆ ಆ್ಯಂಬುಲೆನ್ಸ್ ನಲ್ಲಿ ಕಾರ್ಮಿಕರ ಸಾಗಣೆ; ಆರೋಪ

Update: 2020-04-08 12:33 GMT

ಚಿಕ್ಕಮಗಳೂರು, ಎ.8: ಲಾಕ್‍ಡೌನ್‍ನಿಂದಾಗಿ ಮಂಗಳೂರಿನಲ್ಲಿ ಸಿಲುಕಿಕೊಂಡಿದ್ದ 21 ಕೂಲಿ ಕಾರ್ಮಿಕರನ್ನು ಚಾಲಕನೋರ್ವ ಆ್ಯಂಬುಲೆನ್ಸ್  ನಲ್ಲಿ ತುಂಬಿಕೊಂಡು ಸಾಗಣೆ ಮಾಡುತ್ತಿದ್ದದ್ದು ಪತ್ತೆಯಾದ ಘಟನೆ ಬುಧವಾರ ಜಿಲ್ಲೆಯ ನರಸಿಂಹರಾಜಪುರ ತಾಲೂಕಿನ ಬಾಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದೆ.

ಹಾವೇರಿ ಮೂಲಕ ಆಂಬುಲೆನ್ಸ್ ಚಾಲಕ ಬಸವರಾಜು ಅಲಿಯಾಸ್ ಬಸಪ್ಪ ಎಂಬಾತ ವಿಜಾಪುರ ಮೂಲದ ಕೂಲಿ ಕಾರ್ಮಿಕರಿಂದ ಹಣ ಪಡೆದು ರಹಸ್ಯವಾಗಿ ಅಂಬುಲೆನ್ಸ್ ನಲ್ಲಿ ಮಕ್ಕಳು, ಮಹಿಳೆಯರು, ಪುರುಷರು ಸೇರಿದಂತೆ ಒಟ್ಟು 21 ಮಂದಿಯನ್ನು ತುಂಬಿಕೊಂಡು ದಾವಣಗೆರೆಗೆ ಸಾಗಣೆ ಮಾಡುತ್ತಿದ್ದ ಎಂದು ಆರೋಪಿಸಲಾಗಿದೆ. ಆಂಬುಲೆನ್ಸ್ ಅನ್ನು ವಶಕ್ಕೆ ಪಡೆದಿರುವ ಬಾಳೆಹೊನ್ನೂರು ಪೊಲೀಸರು 21 ಮಂದಿಯನ್ನು ಸದ್ಯ ನರಸಿಂಹರಾಜಪುರ ಪಟ್ಟಣದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಕಟ್ಟಡದಲ್ಲಿ ಆಶ್ರಯ ಒದಗಿಸಿದ್ದಾರೆಂದು ತಿಳಿದು ಬಂದಿದೆ.

ಹಾವೇರಿ ಜಿಲ್ಲೆ ಹಿರೇಕೆರೂರು ಗ್ರಾಮದ ಚಾಲಕ ಬಸವರಾಜು ಮಂಗಳೂರಿನಲ್ಲಿ ಲಾಕ್‍ಡೌನ್‍ನಿಂದಾಗಿ ಸಿಲುಕಿಕೊಂಡಿದ್ದ ಕೂಲಿ ಕಾರ್ಮಿಕರನ್ನು ದಾವಣಗೆರೆವರೆಗೆ ತಲುಪಿಸುವ ನಿಟ್ಟಿನಲ್ಲಿ ಕಾರ್ಮಿಕರಿಂದ ತಲಾ ಎರಡು ಸಾವಿರ ರೂ. ನಂತೆ ಹಣ ಪಡೆದಿದ್ದು, ಬುಧವಾರ ಮುಂಜಾನೆ ಮಂಗಳೂರಿನಿಂದ ಆ್ಯಂಬುಲೆನ್ಸ್ ನಲ್ಲಿ ತುಂಬಿಕೊಂಡು ಮೂಡಬಿದರೆ, ಎಸ್.ಕೆ.ಬಾರ್ಡರ್, ಕಳಸ ಮಾರ್ಗವಾಗಿ ಬಾಳೆಹೊನ್ನೂರು ಪಟ್ಟಣಕ್ಕೆ ಆಗಮಿಸಿದ್ದು, ಈ ವೇಳೆ ಪಟ್ಟಣದ ಚೆಕ್‍ಪೋಸ್ಟ್ ನಲ್ಲಿ ಅನುಮಾನಗೊಂಡ ಪೊಲೀಸರು ವಾಹನವನ್ನು ಪರಿಶೀಲನೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಆ್ಯಂಬುಲೆನ್ಸ್ ನಲ್ಲಿದ್ದ ಎಲ್ಲರೂ ಮಂಗಳೂರಿನಿಂದ ವಿಜಾಪುರಕ್ಕೆ ಹೊರಟಿದ್ದರೆಂದು ತಿಳಿದು ಬಂದಿದ್ದು, ದಾವಣಗೆರೆವರೆಗೆ ಆ್ಯಂಬುಲೆನ್ಸ್ ನಲ್ಲಿ ಕರೆದೊಯ್ಯಲು ಚಾಲಕ ಹಣಪಡೆದಿದ್ದ ಎಂದು ಆರೋಪಿಸಲಾಗಿದೆ. 

ಕೂಡಲೇ ಪೊಲೀಸರು, ಆರೋಗ್ಯ ಇಲಾಖೆಯ ಅಧಿಕಾರಿಗಳು ಆ್ಯಂಬುಲೆನಲ್ಸ್ ನಲ್ಲಿದ್ದವರ ಆರೋಗ್ಯವನ್ನು ತಪಾಸಣೆ ಮಾಡಿ ಎಲ್ಲರನ್ನು ನರಸಿಂಹರಾಜಪುರ ಪಟ್ಟಣದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಕಟ್ಟಡಕ್ಕೆ ಕರೆತಂದಿದ್ದಾರೆ. ಸದ್ಯ ಎಲ್ಲರಿಗೂ ಅಲ್ಲಿಯೇ ಊಟ, ವಸತಿಯೊಂದಿಗೆ ಆಶ್ರಯ ಕಲ್ಪಿಸಲಾಗಿದ್ದು, ಲಾಕ್‍ಡೌನ್ ಅವಧಿ ನಂತರ ಎಲ್ಲರನ್ನು ಅವರವರ ಗ್ರಾಮಗಳಿಗೆ ಕಳಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಾರ್ಮಿಕರನ್ನು ಅಕ್ರಮವಾಗಿ ಅಂಬುಲೆನ್ಸ್‍ನಲ್ಲಿ ಕರೆತಂದ ಆರೋಪದ ಮೇರೆಗೆ ಚಾಲಕ ಹಾಗೂ ವಾಹನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News