ರೇಣುಕಾಚಾರ್ಯ, ಯತ್ನಾಳ್ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಿ,ತಕ್ಷಣವೇ ಬಂಧಿಸಿ: ಸಿದ್ದರಾಮಯ್ಯ ಒತ್ತಾಯ

Update: 2020-04-08 12:58 GMT

ಬೆಂಗಳೂರು, ಎ. 8: ಕೋಮು ಗಲಭೆಗೆ ಪ್ರಚೋದನೆ ನೀಡುವ ಹೇಳಿಕೆ ನೀಡಿದ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಮತ್ತು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಕ್ರಮಿನಲ್ ಕೇಸ್ ದಾಖಲಿಸಿ, ತಕ್ಷಣವೆ ಆ ಇಬ್ಬರನ್ನು ಬಂಧಿಸಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಬುಧವಾರ ಸರಣಿ ಟ್ವೀಟ್ ಮಾಡಿರುವ ಅವರು, 'ಮಾರಕ ಕೊರೋನ ವೈರಸ್ ಸೋಂಕಿನ ವಿರುದ್ಧ ಎಲ್ಲರೂ ಒಗ್ಗಟ್ಟಿನಿಂದ ಹೋರಾಡಬೇಕಾದ ಇಂತಹ ಸಂದರ್ಭದಲ್ಲಿ ಧರ್ಮ ರಾಜಕಾರಣ ಅಮಾನವೀಯ' ಎಂದು ಪ್ರತಿಕ್ರಿಯೆ ನೀಡಿದ್ದಾರೆ.

'ರೇಣುಕಾಚಾರ್ಯ ಅವರು ಬರೀ ಶಾಸಕರಲ್ಲ, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ, ಅವರು ನೀಡುವ ಪ್ರತಿ ಹೇಳಿಕೆ ಮುಖ್ಯಮಂತ್ರಿಯವರ ಹೇಳಿಕೆಯಷ್ಟೇ ಮಹತ್ವ ಹೊಂದಿರುತ್ತದೆ. ಹೀಗಾಗಿ ಕೀಳು ಮಟ್ಟದ ಹೇಳಿಕೆ ನೀಡುವವರು ಅಂತಹ ಹುದ್ದೆಯಲ್ಲಿ ಮುಂದುವರೆಯಲು ಅರ್ಹರಲ್ಲ. ಅವರನ್ನು ಕೂಡಲೇ ಹುದ್ದೆಯಿಂದ ವಜಾ ಮಾಡಬೇಕು' ಎಂದು ಆಗ್ರಹಿಸಿದ್ದಾರೆ.

'ಲಾಕ್ ಡೌನ್ ಉಲ್ಲಂಘಿಸುವವರ ಮತ್ತು ವೈದ್ಯರಿಗೆ ಸಹಕಾರ ನೀಡದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ. ಆದರೆ, ಪ್ರತಿಬಾರಿ ಒಂದು ಧರ್ಮದ ವಿರುದ್ಧ ಸುಳ್ಳು ಸುದ್ದಿ, ಅಪಪ್ರಚಾರದ ಮೂಲಕ ಕೋಮು ದ್ವೇಷ ಹರಡುವ ರಾಜಕಾರಣವನ್ನು ಸಹಿಸಲು ಸಾಧ್ಯವಿಲ್ಲ. ಇಂತಹವರ ವಿರುದ್ಧ ಕ್ರಮ ಕೈಗೊಳ್ಳುತ್ತೇನೆಂದು ಹೇಳಿದ್ದ ಮುಖ್ಯಮಂತ್ರಿ ಯಡಿಯೂರಪ್ಪನವರು ತಮ್ಮ ಮಾತನ್ನು ಉಳಿಸಿಕೊಳ್ಳಬೇಕು' ಎಂದು ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.

'ನಿನ್ನೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕರೆ ಮಾಡಿ, ವಿಧಾನಸಭೆ ಮತ್ತು ವಿಧಾನ ಪರಿಷತ್ ಸದಸ್ಯರ ಸಂಬಳ ಕಡಿತ ಮಾಡುವ ಬಗ್ಗೆ ನನ್ನ ಅಭಿಪ್ರಾಯ ಕೇಳಿದ್ದರು. ನೀವು ಸಂಬಳ ಕಡಿತ ಮಾಡಿ, ನಿಮ್ಮ ನಿರ್ಧಾರ ಸರಿಯಾಗಿದೆ, ನಮ್ಮ ಪಕ್ಷದ ಎಲ್ಲ ಶಾಸಕರು ಇದಕ್ಕೆ ಬೆಂಬಲ ನೀಡುತ್ತಾರೆಂದು ಹೇಳಿದ್ದೇನೆ' ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ಒಂದು ವೇಳೆ ಲಾಕ್‍ಡೌನ್ ಅನ್ನು ಮುಂದುವರಿಸಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾದರೆ ಜನತೆ ಸರಕಾರಕ್ಕೆ ಸಹಕಾರ ನೀಡಬೇಕು ಎಂದು ಮನವಿ ಮಾಡುತ್ತೇನೆ. ಕಾಂಗ್ರೆಸ್ ವತಿಯಿಂದಲೂ ಸಹಕಾರ ನೀಡಲಾಗುವುದು. ಅಗತ್ಯ ವಸ್ತುಗಳ ಮಾರಾಟ, ಖರೀದಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಿ, ಲಾಕ್‍ಡೌನನ್ನು ಮತ್ತಷ್ಟು ಬಿಗಿ ಮಾಡಲಿ.
-ಸಿದ್ದರಾಮಯ್ಯ, ವಿಪಕ್ಷ ನಾಯಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News