×
Ad

ಕೇಂದ್ರ ಸಮ್ಮತಿಸಿದರೆ ಕೊರೋನ ಸೋಂಕು ಮುಕ್ತ ಜಿಲ್ಲೆಗಳಲ್ಲಿ ದಿಗ್ಬಂಧನ ಸಡಿಲಿಕೆ: ಸಿಎಂ ಯಡಿಯೂರಪ್ಪ

Update: 2020-04-08 19:42 IST

ಬೆಂಗಳೂರು, ಎ. 8: ಕೊರೋನ ವೈರಸ್ ಸೋಂಕಿನಿಂದ ಮುಕ್ತವಾಗಿರುವ ಜಿಲ್ಲೆಗಳಲ್ಲಿ ಲಾಕ್‍ಡೌನ್ ಸಡಿಸಲಿಸುವ ಸಂಬಂಧ ಕೇಂದ್ರ ಸರಕಾರ ಸಮ್ಮತಿಸಿದರೆ ಮಾತ್ರ ಎ.14ರ ಬಳಿಕ ದಿಗ್ಬಂಧನ ಸಡಿಲಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಪಿಟಿಐ ಸುದ್ಧಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಅನಿಸಿಕೆ ವ್ಯಕ್ತಪಡಿಸಿದ್ದಾರೆ.

ಎ.14ರ ಬಳಿಕ ದೇಶಾದ್ಯಂತ ವಿಧಿಸಿರುವ 21 ದಿನಗಳ ಲಾಕ್‍ಡೌನ್ ಅವಧಿ ಕೊನೆಗೊಳ್ಳಲಿದೆ. ಇದೇ  ಸಂದರ್ಭದಲ್ಲಿ ರಾಜ್ಯದ ಸಂಪನ್ಮೂಲ ಕ್ರೋಡೀಕರಣಕ್ಕೆ ಅನುಕೂಲ ಆಗುವಂತೆ ಸರಕಾರವು ಮದ್ಯ ಮಾರಾಟದ ಮೇಲಿನ ನಿರ್ಬಂಧವನ್ನು ತೆಗೆದುಹಾಕಲು ಕ್ರಮ ಕೈಗೊಳ್ಳಲು ಉದ್ದೇಶಿಸಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಯಡಿಯೂರಪ್ಪ ಸ್ಪಷ್ಟಣೆ ನೀಡಿದರು.

ರಾಜ್ಯದ ಶಾಸಕರ ಮತ್ತು ವಿಧಾನ ಪರಿಷತ್ ಸದಸ್ಯರ ಸಂಬಂಧ ಶೇ.30ರಷ್ಟು ಕಡಿತ ಮಾಡಲಾಗುತ್ತಿದೆ. ರಾಜ್ಯದ ಮೂವತ್ತು ಜಿಲ್ಲೆಗಳ ಪೈಕಿ 12 ಜಿಲ್ಲೆಗಳಲ್ಲಿ ಮಾರಕ ಕೊರೋನ ವೈರಸ್ ಸೋಂಕಿಗೆ ಸಂಬಂಧಿಸಿದಂತೆ ಯಾವುದೇ ಪ್ರಕರಣಗಳು ದಾಖಲಾಗಿಲ್ಲ ಎಂದು ಯಡಿಯೂರಪ್ಪ ಇದೇ ವೇಳೆ ತಿಳಿಸಿದರು.

ರಾಜ್ಯದಲ್ಲಿ ಈವರೆಗೆ ಕೊರೋನ ವೈರಸ್ ಸೋಂಕಿಗೆ ಐದು ಮಂದಿ ಬಲಿಯಾಗಿದ್ದು, 28 ಮಂದಿ ಚೇತರಿಸಿಕೊಂಡಿದ್ದಾರೆ. ಒಟ್ಟು 181 ಮಂದಿಗೆ ಸೋಂಕು ದೃಢಪಟ್ಟಿದೆ. ಆಯಾ ರಾಜ್ಯಗಳಲ್ಲಿನ ಪರಿಸ್ಥಿತಿಯನ್ನು ಆಧರಿಸಿ ಲಾಕ್‍ಡೌನ್ ಮುಂದುವರಿಕೆ ಬಗ್ಗೆ ತೀರ್ಮಾನ ಕೈಗೊಳ್ಳಲು ಪ್ರಧಾನಿ ಸೂಚಿಸಿದರೆ, ಸೋಂಕು ಮುಕ್ತ ಜಿಲ್ಲೆಗಳಲ್ಲಿ ಲಾಕ್‍ಡೌನ್ ತೆರವು ಮಾಡಲಾಗುವುದು ಎಂದು ಯಡಿಯೂರಪ್ಪ ಸ್ಪಷ್ಟಪಡಿಸಿದರು.

ಪ್ರಧಾನಿಯವರಿಂದ ಅನುಮೋದನೆ ಪಡೆದ ಬಳಿಕ ಎ.14ರ ನಂತರ ಜನರು ಆಯಾ ಜಿಲ್ಲೆಗಳಲ್ಲಿ ತಮ್ಮ ವ್ಯವಹಾರವನ್ನು ಮಾಡಿಕೊಳ್ಳಲು ಅನುಮತಿ ನೀಡಲಾಗುವುದು. ಆದರೆ, ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ಪ್ರಯಾಣಿಸುವುದಕ್ಕೆ ಯಾವುದೇ ಕಾರಣಕ್ಕೂ ಅನುಮತಿ ನೀಡುವುದಿಲ್ಲ ಎಂದು ಯಡಿಯೂರಪ್ಪ ಸ್ಪಷ್ಟಣೆ ನೀಡಿದ್ದಾರೆಂದು ಗೊತ್ತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News