ರಾಜ್ಯದ 18 ಜಿಲ್ಲೆಗಳಲ್ಲಿ ಲಾಕ್ ಡೌನ್ ಮುಂದುವರೆಸಬೇಕು: ಸಚಿವ ಶ್ರೀರಾಮುಲು

Update: 2020-04-08 14:31 GMT

ಮೈಸೂರು,ಎ.8: ರಾಜ್ಯದ 18 ಜಿಲ್ಲೆಗಳಲ್ಲಿ ಲಾಕ್‍ಡೌನ್ ಮುಂದುವರೆದೆರೆ ಒಳ್ಳೆಯದು ಎಂದು ಆರೋಗ್ಯ ಸಚಿವ ಶ್ರೀರಾಮುಲು ಅಭಿಪ್ರಾಯಪಟ್ಟರು. ನಗರದ ಜಿ.ಪಂ.ಸಭಾಂಗಣದಲ್ಲಿ ಬುಧವಾರ ಕೊರೋನ ವೈರಸ್ ನಿಯಂತ್ರಣ ಸಂಬಂಧ ಕೈಗೊಂಡಿರುವ ಅಗತ್ಯ ಕ್ರಮಗಳ ಕುರಿತು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳೊಂದಿಗೆ ವಿಡೀಯೋ ಕಾನ್ಫರೆನ್ಸ್ ಮೂಲಕ ಮಾಹಿತಿ ಪಡೆದು ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.

ಈಗಾಗಲೇ ರಾಜ್ಯವನ್ನು ನಾನು ಪ್ರವಾಸ ಮಾಡಿರುವ ಹಿನ್ನಲೆಯಲ್ಲಿ 18 ಜಿಲ್ಲೆಗಳು ಕೊರೋನ ಸೋಂಕಿತರನ್ನು ಹೊಂದಿವೆ. ಮೈಸೂರು ಸೇರಿದಂತೆ ಕೆಲವು ಜಿಲ್ಲೆಗಳನ್ನು ರೆಡ್‍ಜೋನ್‍ಗಳಾಗಿ ಘೋಷಿಸಲಾಗಿದೆ.  ಅಲ್ಲಿ ಇಷ್ಟು ಬೇಗ ನಿಯಂತ್ರಣ ಬರುವುದು ಸಾಧ್ಯವಿಲ್ಲ, ನಿಯಂತ್ರಣಕ್ಕೆ ಬರಬೇಕು ಎಂದರೆ ಲಾಕ್‍ಡೌನ್ ಮುಂದುವರೆಸಬೇಕು. ಉಳಿದ ಜಿಲ್ಲೆಗಳಲ್ಲಿ ಲಾಕ್‍ಡೌನ್ ತೆರವುಗೊಳಿಸಿ ಸಹಜ ಓಡಾಟಕ್ಕೆ ಅನುಕೂಲಮಾಡಿಕೊಡಬೇಕು. ಈ ಸಂಬಂಧ ಮುಖ್ಯಮಂತ್ರಿಗಳಿಗೆ ನಾಳಿನ ಕ್ಯಾಬಿನೆಟ್ ಸಭೆಯಲ್ಲಿ  ನನ್ನ ಅಭಿಪ್ರಾಯವನ್ನು ತಿಳಿಸುವುದಾಗಿ ಹೇಳಿದರು.

ದೇಶದಲ್ಲಿ ಲಾಕ್‍ಡೌನ್ ಮುಂದುವರೆಸಬೇಕೆ ಬೇಡವೇ ಎಂದು ಎ.11 ರಂದು ತೀರ್ಮಾನಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ವಿಪಕ್ಷಗಳ ನಾಯಕರ ಸಭೆಯಲ್ಲಿ ಹೇಳಿದ್ದಾರೆ. ಕೊರೋನ ಸೋಂಕು ತಡೆಗಟ್ಟಲು ಪಂಜಾಬ್ ಮುಖ್ಯಮಂತ್ರಿ ಎ.31 ರವರೆಗೆ ಲಾಕ್‍ಡೌನ್ ಮುಂದುವರೆಸಲು ತೀರ್ಮಾಸಿದ್ದಾರೆ. ಅದರಂತೆ ರಾಜ್ಯದಲ್ಲೂ ಮುಂದುವರೆದರೆ ಒಳ್ಳೆಯದು ಎಂದು ಹೇಳಿದರು.

ಒಟ್ಟಾರೆ ಎ.9 ರ ಗುರುವಾರ  ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಡೆಯುವ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ರಾಜ್ಯದಲ್ಲಿ ಲಾಕ್ ಡೌನ್ ಮುಂದುವರೆಸಬೇಕೆ ಬೇಡವೇ ಎಂದು ಚರ್ಚಿಸಿ ನಂತರ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದರು.

ರಾಜ್ಯದಲ್ಲಿ ಒಟ್ಟು 181 ಮಂದಿ ಕೊರೋನಾ ಸೋಂಕಿತರು ಕಂಡುಬಂದಿದ್ದು, ಅದರಲ್ಲಿ 28 ಮಂದಿ ಗುಣಮುಖರಾಗಿದ್ದಾರೆ. ರಾಜ್ಯದ 18 ಜಿಲ್ಲೆಗಳಲ್ಲಿ ಕೊರೋನ ಸೋಂಕಿತರು ಕಂಡುಬಂದಿದ್ದು, ಅಲ್ಲಿ ಮಾತ್ರ ಲಾಕ್ ಡೌನ್ ಮುಂದುವರೆಸಬೇಕೆ ಅಥವಾ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಮುಂದುವರೆಸಬೇಕೆ ಎಂದು ಕ್ಯಾಬಿನೆಟ್ ಸಭೆಯಲ್ಲಿ ತೀರ್ಮಾನ ಮಾಡಲಾಗುವುದು ಎಂದು ಹೇಳಿದರು.

ರಾಜ್ಯದಲ್ಲಿ ಕೊರೋನ ನಿಯಂತ್ರಣ ಸಂಬಂಧ ಅಧಿಕಾರಿಗಳು ಕೈಗೊಂಡಿರುವ ಅಗತ್ಯ ಕ್ರಮಗಳ ಕುರಿತು ಬೀದರ್ ನಿಂದ ಚಾಮರಾಜನಗರ ಜಿಲ್ಲೆಯ ವರೆಗೂ ಪ್ರವಾಸ ಕೈಗೊಂಡಿದ್ದೇನೆ. ಅದರಂತೆ ಇಂದು ಚಾಮರಾಜನಗರ ಮತ್ತು ಮೈಸೂರು ಜಿಲ್ಲೆಗೆ ಭೇಟಿ ನೀಡಿದ್ದೇನೆ. ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ, ಕಂದಾಯ ಇಲಾಖೆ ಸೇರಿದಂತೆ ಅನೇಕರು ಬಹಳ ಜವಾಬ್ದಾರಿಯುತವಾಗಿ ಕರ್ತವ್ಯ ನಿರ್ವಹಿಸುತಿದ್ದಾರೆ. ಅವರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸವನ್ನು ಸರ್ಕಾರ ಮಾಡುತ್ತಿದೆ ಎಂದು ಹೇಳಿದರು.

ಮೈಸೂರು ಜಿಲ್ಲೆ ಸೇರಿದಂತೆ ಅನೇಕ ಜಿಲ್ಲೆಗಳು ರೆಡ್‍ಜೋನ್‍ಗಳಾಗಿವೆ. ಮೈಸೂರು ಜಿಲ್ಲೆಯಲ್ಲಿ 3305 ಮಂದಿ ವೀಕ್ಷಣೆಯಲ್ಲಿದ್ದು ಅದರಲ್ಲಿ 1715 ಮಂದಿ ಕ್ವಾರಂಟೈನ್‍ನಲ್ಲಿ ಇದ್ದಾರೆ. 35 ಮಂದಿ ಕೊರೋನಾ ಸೋಂಕಿತರಾಗಿದ್ದಾರೆ. ಅವರೆಲ್ಲರೂ ಆರೋಗ್ಯವಾಗಿದ್ದು, ಅವರಿಗೆ ಬೇಕಾಗಿರುವ ಎಲ್ಲಾ ಅಗತ್ಯ ಕ್ರಮಗಳನ್ನು ಜಿಲ್ಲಾಡಳಿತ ಕೈಗೊಂಡಿದ್ದಾರೆ ಎಂದು ಹೇಳಿದರು.

ಬುಡಕಟ್ಟು ಜನರಿಗೆ ಹಾಲು ಸೇರಿದಂತೆ ಪಡಿತರ ಸಮರ್ಪಕವಾಗಿ ಸಿಗುತ್ತಿಲ್ಲ ಎಂಬ ದೂರು ಕೇಳಿಬಂದಿದೆ. ಹಾಗಾಗಿ ಚಾಮರಾಜನಗರ, ಮಡಿಕೇರಿ ಮತ್ತು ದಕ್ಷಿಣ ಕನ್ನಡ ಭಾಗದ ಬುಡಕಟ್ಟು, ಗುಡ್ಡಗಾಡು ಪ್ರದೇಶದಲ್ಲಿ ವಾಸವಾಗಿರುವವರಿಗೆ ಸಮರ್ಪಕವಾಗಿ ಹಾಲು,ತರಕಾರಿ ಮತ್ತು ಪಡಿತರವನ್ನು ವಿತರಿಸುವಂತೆ ಸೂಚಿಸಲಾಗಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News