ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಮತ್ತೊಂದು ಕೊರೋನ ಸೋಂಕು ದೃಢ

Update: 2020-04-08 14:50 GMT

ಚಿಕ್ಕಬಳ್ಳಾಪುರ: ಕಳೆದ ಮಾರ್ಚ್‍ನಲ್ಲಿ ದೆಹಲಿಯ ಧಾರ್ಮಿಕ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಗೌರಿಬಿದನೂರಿನ 23 ವರ್ಷದ ಯುವಕನೊಬ್ಬನಿಗೆ ಸೋಂಕು ಬುಧವಾರ ದೃಢಪಟ್ಟಿದ್ದು, ಇದರಿಂದಾಗಿ ಜಿಲ್ಲೆಯಲ್ಲಿ ಕೊರೋನ ಸೋಂಕಿತರ ಸಂಖ್ಯೆ 11ಕ್ಕೆ ಏರಿಕೆಯಾಗಿದೆ.

ಸೋಂಕಿತನನ್ನು ಚಿಕ್ಕಬಳ್ಳಾಪುರ ಆಸ್ಪತ್ರೆಯಲ್ಲಿ ರೂಪಿಸಿರುವ ಕ್ವಾರಂಟೈನ್ ವಾರ್ಡಿಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದ್ದು, ಯುವಕನ ತಾಯಿ ಸೇರಿ ಆರು ಮಂದಿಯನ್ನು ಕ್ವಾರಂಟೈನ್‍ಗೆ ಒಳಪಡಿಸಲಾಗಿದೆ. ಈ ಹಿಂದೆ ವಿದೇಶ ಯಾತ್ರೆ ಕೈಗೊಂಡಿದ್ದ ಎರಡು ಕುಟುಂಬಗಳ ಒಟ್ಟು 10 ಮಂದಿಗೆ ಸೋಂಕು ಪತ್ತೆಯಾಗಿದ್ದು, ಇದರಲ್ಲಿ ಒಬ್ಬರು ಮೃತಪಟ್ಟಿದ್ದರೆ ಮತ್ತೊಬ್ಬರು ಆಸ್ಪತ್ರೆಯಲ್ಲಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಮುಂದುವರಿಸಲಾಗಿದೆ.

ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಸೋಂಕಿನ ಪ್ರಕರಣ ಪತ್ತೆಯಾಗದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಮತ್ತು ಸಾರ್ವಜನಿಕರು ನಿರಾತಂಕವಾಗಿದ್ದರು. ಆದರೆ ಬುಧವಾರ ಮತ್ತೆ ಸೋಂಕು ಬೆಳಕಿಗೆ ಬಂದಿರುವುದು ಆತಂಕಕ್ಕೆ ಕಾರಣವಾಗಿದೆ. ಜಿಲ್ಲೆಯಲ್ಲಿ ಮಾ.30ರವರೆಗೆ ಒಟ್ಟು 200 ಮಂದಿ ಹೊರದೇಶಗಳಿಂದ ಬಂದಿದ್ದು, ಅವರಲ್ಲಿ ಈವರೆಗೆ ಒಟ್ಟು 11 ಪ್ರಕರಣಗಳು ದೃಢಪಟ್ಟಿದ್ದು, ಇವರೊಂದಿಗೆ ಸಂಪರ್ಕದಲ್ಲಿದ್ದ 56 ಮಂದಿ ಸೇರಿ ಒಟ್ಟು 256 ಮಂದಿಗೆ ನಿಗಾ ಇಡಲಾಗಿದೆ. 

ಇದರಲ್ಲಿ 27 ಮಂದಿ 14 ದಿನಗಳೊಳಗಿನ ಅವಧಿಯಲ್ಲಿದ್ದು, 136 ಮಂದಿ 14 ದಿನದ ಕ್ವಾರಂಟೈನ್ ಪೂರೈಸಿದ್ದಾರೆ. 83 ಮಂದಿ 28 ದಿನ ಪೂರೈಸಿದ್ದಾರೆ. ನಿಝಾಮುದ್ದೀನ್ ಸಭೆಯಲ್ಲಿ ಭಾಗಿಯಾಗಿದ್ದ ಎಲ್ಲ 61 ಮಂದಿಯ ರಕ್ತದ ಮಾದರಿಗಳನ್ನು ಸಂಗ್ರಹಿಸಲಾಗಿದ್ದು, ಅದರಲ್ಲಿ 57 ಮಾದರಿಗಳು ನೆಗೆಟಿವ್‍ ಬಂದಿದೆ. ಒಂದು ಮಾತ್ರ ಪಾಸಿಟಿವ್‍ ಬಂದಿದ್ದು, 22 ಮಂದಿಯ ವರದಿ ಇನ್ನಷ್ಟೇ ಬರಬೇಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News