ಮಗುವಿನಿಂದ ದೂರವಿದ್ದು ಕೊರೋನ ವಿರುದ್ಧ ಹೋರಾಡುತ್ತಿರುವ ನರ್ಸ್ ಗೆ ಬಿಎಸ್ ವೈ ಕರೆ

Update: 2020-04-08 15:32 GMT

ಬೆಳಗಾವಿ, ಎ.8: ಕೊರೋನ ಸೋಂಕಿತರಿಗೆ ಚಿಕಿತ್ಸೆ ನೀಡಲು ಮನೆ, ಗಂಡ ಹಾಗೂ ಮಗುವಿನಿಂದ ದೂರವಿರುವ ಶುಶ್ರೂಷಕಿ ಸುನಂದ ಸೇವೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. 

ವೈರಲ್ ಆದ ದೃಶ್ಯ ನೋಡಿದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಸುನಂದ ಅವರಿಗೆ ಕರೆ ಮಾಡಿ ಸಾಂತ್ವನ ಹೇಳಿದ್ದಾರೆ. ಅಲ್ಲದೆ ಅವರ ಸೇವೆಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಶುಶ್ರೂಷಕಿಯಾಗಿ ಸೇವೆ ಸಲ್ಲಿಸುತ್ತಿರುವ ಸುನಂದಾ ಅವರನ್ನು ನೋಡಲು ಅವರ ಮಗು ಹಾಗೂ ಪತಿ ಉಳಿದುಕೊಂಡಿದ್ದ ಹೊಟೇಲ್‍ಗೆ ಬಂದಿದ್ದರು. ಕೊರೋನ ಚಿಕಿತ್ಸೆ ನೀಡುತ್ತಿರುವ ಕಾರಣದಿಂದಾಗಿ ದೂರದಲ್ಲೇ ಇದ್ದು ಮಗುವನ್ನು ನೋಡಿ ಕಣ್ಣೀರು ಸುರಿಸುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಸುನಂದ ಅವರ ಕರ್ತವ್ಯ ನಿಷ್ಠೆಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಸುನಂದಾ ಅವರು ಬೆಳಗಾವಿ ಜಿಲ್ಲೆಯ ಭೀಮ್ಸ್ ಆಸ್ಪತ್ರೆಯಲ್ಲಿ ನರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಕೊರೋನ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ಕಾರಣದಿಂದಾಗಿ ಅವರು ಮನೆ ಹಾಗೂ ಕುಟುಂಬದಿಂದ ಅನಿವಾರ್ಯವಾಗಿ ದೂರ ಉಳಿಯಬೇಕಾಗಿದೆ. ಕಳೆದ 15 ದಿನಗಳಿಂದ ಅವರು ಮನೆಗೆ ಹೋಗದೆ ವೈದ್ಯರು ಮತ್ತು ನರ್ಸ್‍ಗಳಿಗಾಗಿಯೇ ಪ್ರತ್ಯೇಕವಾಗಿರಿಸಿರುವ ಹೊಟೇಲ್‍ನಲ್ಲಿ ವಾಸವಾಗಿದ್ದಾರೆ.

ಅಮ್ಮನನ್ನು ನೋಡಲು ಸ್ವತಃ ಅವರ ಮಗು ಹಾಗೂ ಪತಿ ಆಸ್ಪತ್ರೆಗೆ ಬರುತ್ತಾರೆ. ಹತ್ತಿರಲ್ಲಿ ಭೇಟಿ ಮಾಡಲು ಸಾಧ್ಯವಾಗದೆ ದೂರದಲ್ಲೇ ಬೈಕ್‍ನಲ್ಲಿ ಕುಳಿತುಕೊಂಡು ಪರಸ್ಪರ ನೋಡಿಕೊಳ್ಳುತ್ತಾರೆ. ಈ ದೃಶ್ಯವನ್ನು ಸ್ಥಳೀಯರು ಕ್ಯಾಮರಾದಲ್ಲಿ ಸೆರೆಹಿಡಿದ್ದಿದ್ದಾರೆ. ಇದೀಗ ಇದು ವೈರಲ್ ಆಗಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಇದೇ ರೀತಿ ಸಾವಿರಾರು ವೈದ್ಯರು, ಆರೋಗ್ಯ ಕಾರ್ಯಕರ್ತೆಯರು ಮನೆಯಿಂದ, ಕುಟುಂಬದಿಂದ ದೂರ ಇದ್ದು ಕೊರೋನ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ಇವರೆಲ್ಲರೂ ನಿಜವಾದ ಹೀರೋ, ಹೀರೋಯಿನ್‍ಗಳು ಎನ್ನುತ್ತಿದ್ದಾರೆ ನೆಟ್ಟಿಗರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News