ಚಾಮರಾಜನಗರ: ತಬ್ಲಿಗಿ ಜಮಾತ್ ಸಭೆಯಲ್ಲಿ ಭಾಗಿಯಾಗಿದ್ದ 21 ಮಂದಿಯ ವರದಿ ನೆಗೆಟಿವ್

Update: 2020-04-08 16:24 GMT

ಚಾಮರಾಜನಗರ: ತಬ್ಲಿಗಿ ಜಮಾತ್ ಧರ್ಮಸಭೆಯಲ್ಲಿ ಭಾಗವಹಿಸಿದ್ದವರ ಪೈಕಿ 22 ಮಂದಿಯ ಗಂಟಲಿನ ದ್ರವ ಹಾಗೂ ರಕ್ತದ ಮಾದರಿಯನ್ನು ಎ.6ರಂದು ಪರೀಕ್ಷೆಗಾಗಿ ಕಳುಹಿಸಲಾಗಿದ್ದು, ಅದರ ವರದಿ ಬಂದಿದ್ದು, 21 ಮಂದಿಯ ವರದಿಯು ನೆಗೆಟಿವ್ ಆಗಿದೆ. ಒಬ್ಬರ ವರದಿ ನಿರೀಕ್ಷಿಸಲಾಗುತ್ತಿದೆ. ಈ ಬಗ್ಗೆ ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಅವರು ತಿಳಿಸಿದ್ದಾರೆ    

ತಬ್ಲಿಗಿ ಜಮಾತ್ ಧರ್ಮಸಭೆಯಲ್ಲಿ ಭಾಗವಹಿಸಿದ್ದ 85 ಜನರಲ್ಲಿ 23 ಜನರನ್ನು ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದ ಕ್ವಾರೆಂಟೈನ್ ಕೇಂದ್ರ ಹಾಗೂ 62 ಜನರನ್ನು ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಕ್ವಾರೆಂಟೈನ್ ಕೇಂದ್ರದಲ್ಲಿ ಪ್ರತ್ಯೇಕಿಸಿ ನಿಗಾವಣೆ ಮಾಡಲಾಗುತ್ತಿದೆ. ಇವರಲ್ಲಿ 62 ಜನರ ಗಂಟಲಿನ ದ್ರವ ಹಾಗೂ ರಕ್ತದ ಮಾದರಿಯನ್ನು ಪರೀಕ್ಷೆಗಾಗಿ ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಕೇಂದ್ರಕ್ಕೆ ಕಳುಹಿಸಿಕೊಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.  

ಕೊರೊನ ಪಾಸಿಟಿವ್ ವ್ಯಕ್ತಿಯು ಉದ್ಯೋಗ ಮಾಡುತ್ತಿದ್ದ ಮೈಸೂರು ಜಿಲ್ಲೆಯ ನಂಜನಗೂಡು ಪಟ್ಟಣದ ಜುಬಿಲಿಯೆಂಟ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಚಾಮರಾಜನಗರ ಜಿಲ್ಲೆಯ 52 ವ್ಯಕ್ತಿಗಳನ್ನು ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದ ಕ್ವಾರೆಂಟೈನ್ ಕೇಂದ್ರದಲ್ಲಿ ಪ್ರತ್ಯೇಕಿಸಿ ನಿಗಾ ವಹಿಸಲಾತ್ತಿದ್ದು ಇವರಲ್ಲಿ 48 ಮಂದಿ 14 ದಿನಗಳ ಹೋಮ್ ಕ್ವಾರೆಂಟೈನ್ ಅವಧಿಯನ್ನು ಪೂರ್ಣಗೊಳಿಸಿದ್ದಾರೆ. 

ವಿದೇಶಗಳಿಂದ ಪ್ರಯಾಣಿಸಿ ಚಾಮರಾಜನಗರ ಜಿಲ್ಲೆಗೆ ಇದುವರೆಗೆ ಒಟ್ಟು 43 ಜನರು ಬಂದಿದ್ದು ಇವರೆಲ್ಲರೂ ಸಹ 14 ದಿನಗಳ ಹೋಮ್ ಕ್ವಾರೆಂಟೈನ್ ಅವಧಿಯನ್ನು ಪೂರ್ಣಗೊಳಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News