ಚಿಕ್ಕಮಗಳೂರು: ಲಾಕ್‍ಡೌನ್ ಮತ್ತಷ್ಟು ಬಿಗಿ; ನೂರಾರು ವಾಹನಗಳು ಜಪ್ತಿ

Update: 2020-04-08 16:52 GMT

ಚಿಕ್ಕಮಗಳೂರು, ಎ.8: ಜಿಲ್ಲೆಯಲ್ಲಿ ಕಳೆದ 15 ದಿನಗಳಿಂದ ಲಾಕ್‍ಡೌನ್‍ಗೆ ಜನರು ಉತ್ತಮ ಬೆಂಬಲ ನೀಡಿದ್ದು, ಕೊರೋನ ಸೋಂಕಿನ ನಿಯಂತ್ರಣದ ಉದ್ದೇಶದಿಂದ ಪೊಲೀಸರು ಸಾರ್ವಜನಿಕರನ್ನು ಮನೆಯಿಂದ ಹೊರಬರದಂತೆ ತಡೆಯಲು ಕಟ್ಟುನಿಟ್ಟಿನ ಕ್ರಮಕೈಗೊಂಡಿದ್ದಾರೆ.

ಈ ಮಧ್ಯೆಯೂ ಕೆಲವೆಡೆ ಜನರು ಲಾಕ್‍ಡೌನ್‍ ಉಲ್ಲಂಘಿಸುತ್ತಿರುವುದು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ. 

ದೇಶಾದ್ಯಂತ ಕೊರೋನ ಸೋಂಕು ಪೀಡಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಲಾಕ್‍ಡೌನ್‍ ಅನ್ನು ಮತ್ತಷ್ಟು ಬಿಗಿಗೊಳಿಸುತ್ತಿದೆ. ಮನೆಯಿಂದ ಜನರು ಅನಗತ್ಯವಾಗಿ ಹೊರ ಬರುವುದನ್ನು ತಡೆಯುವ ನಿಟ್ಟಿನಲ್ಲಿ ಪೊಲೀಸರು ವಾಹನಗಳನ್ನು ವಶಕ್ಕೆ ಪಡೆಕೊಳ್ಳುತ್ತಿದ್ದಾರೆ. ಅಲ್ಲದೇ ಎಫ್‍ಐಆರ್‍ಅನ್ನು ದಾಖಲಿಸಲಾಗುತ್ತಿದೆ. 

ಜನರ ಓಡಾಟ ಹಾಗೂ ವಾಹನಗಳ ಸಂಚಾರವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರೀಶ್ ಪಾಂಡೆ ಅವರು ಕಳೆದ ಎರಡು ದಿನಗಳಿಂದ ರಸ್ತಗಿಳಿದು ವಾಹನಗಳ ತಪಾಸಣಾ ಕೆಲಸವನ್ನು ಬಿಗಿಗೊಳಿಸಿದ್ದಾರೆ. ಬುಧವಾರ ನಗರದ ಬೋಳರಾಮೇಶ್ವರ ದೇವಾಲಯ ಸಮೀಪದ ಚಕ್‍ಪೋಸ್ಟ್ ಗೆ ಭೇಟಿ ನೀಡಿದ್ದ ಎಸ್ಪಿ ಹರೀಶ್ ಪಾಂಡೆ ತಾವೇ ವಾಹನಗಳನ್ನು ತಪಾಸಣೆಗೆ ಒಳಪಡಿಸಿದರು.

ಕಾರಣವಿಲ್ಲದೇ ತಿರುಗಾಡುವರ ವಾಹನಗಳನ್ನು ಜಪ್ತಿ ಮಾಡುವಂತೆ ಸಿಬ್ಬಂದಿಗೆ ಸೂಚನೆ ನೀಡಿದರು. ಸೂಕ್ತ ದಾಖಲೆ ಪತ್ರಗಳು, ಪಾಸ್ ಇಲ್ಲದೇ ವಾಹನ, ಬೈಕ್‍ಗಳಲ್ಲಿ ತಿರುಗುತ್ತಿದ್ದವರ  ಬೈಕ್‍ ಸೀಝ್ ಮಾಡಲಾಯಿತು.

ನಕಲಿ ಕರ್ಫ್ಯೂ ಪಾಸ್ ಹಾವಳಿ ಹೆಚ್ಚಾದ ಹಿನ್ನೆಲೆಯಲ್ಲಿ ಕರ್ಫ್ಯೂ ಪಾಸ್ ಹೊಂದಿರುವವರ ಪಾಸ್‍ಗಳನ್ನು ಪೊಲೀಸ್ ಸಿಬ್ಬಂದಿ ಪರಿಶೀಲನೆ ನಡೆಸಿದರು. ಎಲ್ಲಾ ಚಕ್‍ಪೋಸ್ಟ್ ಗಳಲ್ಲಿ ಹೆಚ್ಚುವರಿ ಸಿಬ್ಬಂದಿ ನಿಯೋಜಿಸಿ ಕಟ್ಟುನಿಟ್ಟಾಗಿ ವಾಹನ ತಪಾಸಣೆ ಮಾಡಿಸಲಾಗುತ್ತಿದ್ದು, ಅನಗತ್ಯವಾಗಿ ತಿರುಗಾಡುವರ ವಾಹನಗಳನ್ನು ವಶಕ್ಕೆ ಪಡೆದುಕೊಳ್ಳಲಾಗುತ್ತಿದೆ. ಜನರು ಬೇಕಾಬಿಟ್ಟಿ ತಿರುಗಾಡುತ್ತಿದ್ದು, ಸರಕಾರದ ಆದೇಶಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ ಎನ್ನುವಂತೆ ವರ್ತಿಸುತ್ತಿರುವುದರಿಂದ ಪೊಲೀಸರು ಜನ, ವಾಹನಗಳ ಸಂಚಾರವನ್ನು ನಿಯಂತ್ರಿಸಲು ಇಂತಹ ಕಟ್ಟುನಿಟ್ಟಿನ ಕ್ರಮಕ್ಕೆ ಪೊಲೀಸ್ ಇಲಾಖೆ ಮುಂದಾಗಿದೆ.

ಚಿಕ್ಕಮಗಳೂರು ನಗರದಲ್ಲಿ ಪ್ರತೀ ಬುಧವಾರ ವಾರದ ಸಂತೆಯಾಗಿದ್ದು, ಕೊರೊನಾ ಸೋಂಕು ಹಿನ್ನಲೆಯಲ್ಲಿ ವಾರದ ಸಂತೆಯನ್ನು ನಿಷೇಧಿಸಲಾಗಿದೆ. ಲಾಕ್‍ಡೌನ್ ಆರಂಭಗೊಂಡ ನಂತರ ಎರಡನೇ ವಾರದ ಸಂತೆಯೂ ರದ್ದಾಗಿದೆ.

ಇನ್ನು ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಲಾಕ್‍ಡೌನ್‍ಗೆ ಎಂದಿನಂತೆ ಉತ್ತಮ ಬೆಂಬಲ ವ್ಯಕ್ತವಾಗಿದ್ದು, ಗ್ರಾಮೀಣ ಭಾಗದಲ್ಲಿ ಪೊಲೀಸರು ಚೆಕ್‍ಪೋಸ್ಟ್‍ಗಳ ಮೂಲಕ ವಾಹನಗಳು ಹಾಗೂ ಸಾರ್ವಜನಿಕರ ಬೇಕಾಬಿಟ್ಟಿ ತಿರುಗಾಟಕ್ಕೆ ಬ್ರೇಕ್ ಹಾಕಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News