ಜ್ಯುಬಿಲಿಯಂಟ್ ಕಂಪನಿ ಆರಂಭಕ್ಕೆ ರಾಜಕಾರಣಿಗಳು, ಉದ್ಯಮಿಗಳ ಒತ್ತಡ: ಶಾಸಕ ಹರ್ಷವರ್ಧನ್ ಗಂಭೀರ ಆರೋಪ

Update: 2020-04-08 17:00 GMT

ಮೈಸೂರು,ಎ.8: ನಂಜನಗೂಡಿನ ಜ್ಯುಬಿಲಿಯಂಟ್ ಕಂಪನಿ ಆರಂಭಕ್ಕೆ ಕೆಲವು ರಾಜಕಾರಣಿಗಳು ಮತ್ತು ಉದ್ಯಮಿಗಳ ಒತ್ತಡ ಇದೆ ಎಂದು ನಂಜನಗೂಡು ಶಾಸಕ ಹರ್ಷವರ್ಧನ್ ಗಂಭೀರ ಆರೋಪ ಮಾಡಿದ್ದಾರೆ. ನಗರದ ಜಿ.ಪಂ. ಸಭಾಂಗಣದಲ್ಲಿ ಬುಧವಾರ ಆರೋಗ್ಯ ಸಚಿವ ಶ್ರೀರಾಮುಲು ಅವರು ಕೊರೋನ ಸಂಬಂಧ ನಡೆಸಿದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಸಭೆಯಲ್ಲಿ ಭಾಗವಹಿಸಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು. ಕೊರೋನ ಸೋಂಕು ಹರಡಿ ಜಿಲ್ಲೆಯಲ್ಲಿ ಆತಂಕದ ಸ್ಥಿತಿಗೆ ಸಿಲುಕಿಸಿರುವ ಜ್ಯುಬಿಲಿಯಂಟ್ ಕಂಪನಿ ಆರಂಭಕ್ಕೆ ಸಹಕರಿಸುವಂತೆ ಕೆಲವು ರಾಜಕಾರಣಿಗಳು ಮತ್ತು ಉದ್ಯಮಿಗಳು ಪ್ರಯತ್ನಿಸುತ್ತಿದ್ದಾರೆ. ಅವರು ಯಾರು ಎಂದು ಈಗ ಹೇಳುವುದಿಲ್ಲ, ಒಟ್ಟಿನಲ್ಲಿ ನನ್ನ ಮೇಲೆ ಒತ್ತಡ ಇರುವುದಂತು ಸತ್ಯ ಎಂದು ಹೇಳಿದರು. 

ಜ್ಯುಬಿಲಿಯಂಟ್ ಕಂಪನಿಯವರ ನಿರ್ಲಕ್ಷ್ಯದಿಂದ ಕೊರೋನ ಸೋಂಕು ಹರಡಿದೆ. ಚೀನಾದಿಂದ ಅವರ ಕಂಪನಿಗೆ ಆಮದು ಮಾಡಿಕೊಂಡ ಕಚ್ಚಾವಸ್ತುಗಳನ್ನು ಮುಂಜಾಗ್ರತೆಯಿಂದ ಪರೀಕ್ಷಿಸಿದ್ದರೆ ಈ ಸ್ಥಿತಿ ಬರುತ್ತಿರಲಿಲ್ಲ. ಇವರು ಮಾಡಿದ ಎಡವಟ್ಟಿನಿಂದ ಕಂಪನಿಯ ನೌಕರರು ಸೇರಿದಂತೆ ನಂಜನಗೂಡಿನ ಜನತೆ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಕಂಪನಿ ಮಾಲಕನಿಗೆ ಜನರ ಕಷ್ಟಕ್ಕಿಂತ ಕಂಪನಿ ಆರಂಭ ಮುಖ್ಯವಾಗಿದೆ. ಕೊರೋನ ಹರಡಲು ಕಾರಣವಾಗಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ಕಂಪನಿಯ ಎಲ್ಲಾ ನೌಕರರು ಸುರಕ್ಷಿತಗೊಂಡ ನಂತರವಷ್ಟೇ ಕಂಪನಿ ಆರಂಭಕ್ಕೆ ಅವಕಾಶ ಕಲ್ಪಿಸಲಾಗುವುದು. ಇಲ್ಲದಿದ್ದರೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ನನಗೆ ನನ್ನ ಕ್ಷೇತ್ರದ ಜನರ ಆರೋಗ್ಯ ಮುಖ್ಯ. ಅವರ ಆರೋಗ್ಯದ ದೃಷ್ಟಿಯಿಂದಷ್ಟೇ ಕಂಪನಿ ಆರಂಭಕ್ಕೆ ಅನುಮತಿ ನೀಡುವುದಿಲ್ಲ. ಚೀನಾದಿಂದ ಬಂದ ಕಚ್ಚಾವಸ್ತುಗಳ ಪರೀಕ್ಷೆಯನ್ನು ಮಹರಾಷ್ಟ್ರದ ಪುಣೆಯಲ್ಲಿ ಮಾಡಿಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಅದರ ವರದಿಯೂ ಬರಲಿ, ಎಲ್ಲಾ ನೌಕರರ ವರದಿಯೂ ಬರಲಿ ನಂತರ ನೋಡೋಣ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News