ಬೀದರ್: ತರಕಾರಿ ಖರೀದಿಸಿ ಹಿಂದಿರುಗುತ್ತಿದ್ದ ಧರ್ಮಗುರುವಿಗೆ ಮಾರಣಾಂತಿಕ ಹಲ್ಲೆ; ಪೊಲೀಸ್ ಅಧಿಕಾರಿ ಅಮಾನತು

Update: 2020-04-08 17:38 GMT
ಹಫೀಝ್ ಶೈಖ್ ನಾಸಿರುದ್ದೀನ್

ಬೀದರ್, ಎ.8: ತರಕಾರಿ ಖರೀದಿಸಿ ವಾಪಸಾಗುತ್ತಿದ್ದ ಧರ್ಮಗುರು ಒಬ್ಬರನ್ನು ತಡೆದು ನಿಲ್ಲಿಸಿದ ಪೊಲೀಸ್ ಅಧಿಕಾರಿಯೊಬ್ಬರು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಬೀದರ್ ನ ಹುಮ್ನಾಬಾದ್ ನಡೆದಿದೆ ಎಂದು ಆರೋಪಿಸಲಾಗಿದೆ. ಇಂದು ಬೆಳಗ್ಗೆ 8 ಗಂಟೆಗೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಇಲ್ಲಿನ ಮಸ್ಜಿದ್ ಎ ಮುರಾದ್ ನ ಧರ್ಮಗುರು ಹಫೀಝ್ ಶೈಖ್ ನಾಸಿರುದ್ದೀನ್ ಎಂಬವರು ಇಂದು ಬೆಳಗ್ಗೆ ತರಕಾರಿ ಖರೀದಿಸಲು ಅಂಗಡಿಗೆ ತೆರಳಿದ್ದರು. ಅಂಗಡಿಯಿಂದ ಹಿಂದಿರುಗುತ್ತಿದ್ದ ವೇಳೆ ಅವರನ್ನು ತಡೆದ ಎಎಸ್ ಐ ಬಸವರಾಜ್ ಲಾಠಿಯಿಂದ ಹಲ್ಲೆ ನಡೆಸಿದ್ದು, ನಾಸಿರುದ್ದೀನ್ ಅವರ ಮೂಗಿಗೆ ಗಂಭೀರ ಗಾಯವಾಗಿತ್ತು. ಕೂಡಲೇ ಅವರನ್ನು ಗುಲ್ಬರ್ಗದ ಜಿಲ್ಲಾಸ್ಪತ್ರೆಗೆ ಸಾಗಿಸಲಾಯಿತು.

"ತರಕಾರಿ ಅಂಗಡಿಯಿಂದ ನಾಸಿರುದ್ದೀನ್ ವಾಪಸಾಗುತ್ತಿದ್ದರು. ಇದೇ ರಸ್ತೆಯಲ್ಲಿ ಆಗಲೇ 3-4 ವಾಹನಗಳು ಸಾಗಿತ್ತು. ಆದರೆ ನಾಸಿರುದ್ದೀನ್ ರ ಗಡ್ಡ, ಕುರ್ತಾ ಮತ್ತು ಟೋಪಿಯನ್ನು ಗಮನಿಸಿದ ಪೊಲೀಸರು ಅವರನ್ನು ತಡೆದರು. ಈ ಸಂದರ್ಭ ಎಎಸ್ ಐ ಬಸವರಾಜ್ ನಿಮ್ಮಿಂದಲೇ ಭಾರತದಲ್ಲಿ ಕೊರೋನ ವೈರಸ್ ಹರಡುತ್ತಿದೆ ಎಂದು ನಿಂದಿಸಲು ಆರಂಭಿಸಿದರು" ಎಂದು ನಾಸಿರುದ್ದೀನ್ ಆರೋಪಿಸಿರುವುದಾಗಿ ಅವರ ಮಾವ 'ವಾರ್ತಾ ಭಾರತಿ'ಗೆ ಪ್ರತಿಕ್ರಿಯಿಸಿದ್ದಾರೆ.

"ಇಷ್ಟೇ ಅಲ್ಲದೆ ಎಎಸ್ ಐ ನಾಸಿರುದ್ದೀನ್ ತಲೆಗೆ ಹಲ್ಲೆ ನಡೆಸಲು ಮುಂದಾದರು. ನಾಸಿರುದ್ದೀನ್ ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಅವರ ಮೂಗಿಗೆ ಗಂಭೀರ ಏಟು ಬಿದ್ದಿತ್ತು" ಎಂದವರು ಆರೋಪಿಸಿದ್ದಾರೆ.

ಎಎಸ್ ಐ ಬಸವರಾಜ್ ಉದ್ದೇಶಪೂರ್ವಕವಾಗಿ ಹಲ್ಲೆ ನಡಸಿಲ್ಲ, ಇದು ಆಕಸ್ಮಿಕವಾಗಿ ನಡೆದ ಘಟನೆ ಎಂದು ಹುಮ್ನಾಬಾದ್ ಸಿಪಿಐ ನಾನೇಗೌಡರ್ ಪ್ರತಿಕ್ರಿಯಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಬೀದರ್ ಎಸ್ಪಿ ಡಿ.ಎಲ್. ನಾಗೇಶ್ , ಎಎಸ್ ಐ ಬಸವರಾಜ್ ರನ್ನು ಅಮಾನತುಗೊಳಿಸಲಾಗಿದ್ದು, ಈ ಬಗ್ಗೆ ಇಲಾಖೆಯ ತನಿಖೆ ನಡೆಸಲಾಗುವುದು ಎಂದಿದ್ದಾರೆ.

Writer - ದಾವೂದ್ ಶೇಖ್

contributor

Editor - ದಾವೂದ್ ಶೇಖ್

contributor

Similar News