ಲಾಕ್ ಡೌನ್ ಕುರಿತು ಶೀಘ್ರ ತೀರ್ಮಾನ: ಬಸವರಾಜ ಬೊಮ್ಮಾಯಿ

Update: 2020-04-08 17:44 GMT

ಬೆಂಗಳೂರು, ಎ.8: ಕೊರೋನ ವೈರಸ್ ನಿಯಂತ್ರಣ ಕುರಿತು ಹೇರಲಾಗಿರುವ ಲಾಕ್ ಡೌನ್ ವಿಸ್ತರಿಸಬೇಕೆ ಅಥವಾ ಬೇಡವೇ ಎನ್ನುವ ಬಗ್ಗೆ ಶೀಘ್ರದಲ್ಲೇ ತೀರ್ಮಾನ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೋನ ನಿಯಂತ್ರಣಕ್ಕೆ ಸರಕಾರ ಎಲ್ಲ ರೀತಿಯ ಕ್ರಮಗಳನ್ನು ಕೈಗೊಂಡಿದ್ದು, ಜನತೆ ಇನ್ನೊಂದು ವಾರ ಲಾಕ್ ಡೌನ್ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ವಾರದ ಬಳಿಕ ಪರಿಸ್ಥಿತಿ ಆಧಾರದ ಮೇಲೆ ವಿಸ್ತರಣೆ ಭವಿಷ್ಯ ನಿಂತಿದೆ ಎಂದರು.

ಲಾಕ್ ಡೌನ್ ಸಂದರ್ಭದಲ್ಲಿ ಸರಕಾರದ ಆದೇಶಗಳನ್ನು ಉಲ್ಲಂಘಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಪೊಲೀಸರ ಜತೆ ಜನ ಸಾಮಾನ್ಯರು ಸಹಕಾರದಿಂದ ವರ್ತಿಸಿದರೆ ಪೊಲೀಸರು ಸಹ ಸೂಕ್ತ ರೀತಿಯಲ್ಲಿ ಮಾರ್ಗದರ್ಶನ ಮಾಡಲಿದ್ದಾರೆ. ಇಲ್ಲವಾದಲ್ಲಿ ಕ್ರಮ ತೆಗೆದುಕೊಳ್ಳುವುದು ಖಚಿತ ಎಂದರು. 

ಕೊರೋನ ವೈರಸ್ ನಿಯಂತ್ರಣದಲ್ಲಿ ರಾಜ್ಯ ಸರಕಾರ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಜನಸಾಮಾನ್ಯರು ಆತಂಕಪಡುವ ಅಗತ್ಯವಿಲ್ಲ ಇಲ್ಲ. ಇಡೀ ದೇಶದಲ್ಲಿ ಲಾಕ್ಡೌನ್ ಘೋಷಿಸಿದ ಮೊದಲ ರಾಜ್ಯ ಕರ್ನಾಟಕ. ಪರಿಣಾಮಕಾರಿ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳುತ್ತಿರುವ ರಾಜ್ಯವೂ ಸಹ ಕರ್ನಾಟಕ ಎಂದು ನುಡಿದರು.

ಕೊರೋನ ವೈರಸ್ ಸಂಕಷ್ಟ ಸಂದರ್ಭದಲ್ಲಿ ಹಗಲು ರಾತ್ರಿ ದುಡಿಯುತ್ತಿರುವ ಪೊಲೀಸ್ ಸಿಬ್ಬಂದಿಗೆ ಭತ್ಯ ಹೆಚ್ಚಿಸುವ ಬೇಡಿಕೆ ಇದ್ದು, ಇದನ್ನು ಸಹ ಸಕಾರಾತ್ಮಕವಾಗಿ ಪರಿಗಣಿಸಲಾಗುವುದು ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ತಪಾಸಣೆ ನಡೆಸಿದ ಸಚಿವರು!
ಲಾಕ್ ಡೌನ್ ಆದೇಶವನ್ನು ಉಲ್ಲಂಘಿಸಿ ನಗರದ ವಿವಿಧ ರಸ್ತೆಗಳಲ್ಲಿ ಬುಧವಾರ ಓಡಾಡುತಿದ್ದ ವಾಹನ ಸವಾರರನ್ನು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹಾಗೂ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಅವರು ತಪಾಸಣೆ ನಡೆಸಿದರು.

ಬೆಂಗಳೂರಿನ ಪೂರ್ವ, ಪಶ್ಚಿಮ, ಉತ್ತರ ವಿಭಾಗದ ಮೆಜೆಸ್ಟಿಕ್, ಪೀಣ್ಯ, ಹೆಬ್ಬಾಳ, ಟ್ಯಾನರಿ ರಸ್ತೆ ಸೇರಿದಂತೆ ನಗರದ ಪ್ರಮುಖ ರಸ್ತೆಗಳಲ್ಲಿ ಸಾರ್ವಜನಿಕರ ಕಾರು, ಬೈಕ್‍ಗಳನ್ನು ತಡೆದು ತಪಾಸಣೆ ಮಾಡಿದರು. ಈ ವೇಳೆ ಅನಗತ್ಯವಾಗಿ ಓಡಾಡುವವರಿಗೆ ಎಚ್ಚರಿಕೆ ನೀಡಿದರು. ಇನ್ನು ಪಾಸ್‍ಗಳಿಲ್ಲದೇ ತಿರುಗಾಡುತ್ತಿದ್ದ ಕೆಲವು ವಾಹನಗಳನ್ನು ಜಪ್ತಿ ಮಾಡಲು ಸೂಚನೆ ನೀಡಿದರು.

ಅನಿವಾರ್ಯ ಕಾರಣಗಳಿದ್ದರೆ ಮಾತ್ರ ಹಾಗೂ ಅಗತ್ಯ ವಸ್ತುಗಳನ್ನು ಖರೀದಿಸಲು ಮಾತ್ರ ಹೊರಗಡೆ ಬರಬೇಕು ಎಂದು ಸಚಿವರು ಎಚ್ಚರಿಕೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News