ಕೊರೋನ ನಿರ್ವಹಣೆಯಲ್ಲಿ ಬೆಂಗಳೂರು, ತುಮಕೂರು ಮಾದರಿ: ಲವ ಅಗರ್‍ವಾಲ್

Update: 2020-04-08 18:09 GMT

ಬೆಂಗಳೂರು, ಎ.8: ಕೊರೋನ ಸೋಂಕು ನಿಯಂತ್ರಣ ಮಾಡುವಲ್ಲಿ ಬೆಂಗಳೂರು ಹಾಗೂ ತುಮಕೂರು ದೇಶದ ಇತರೆ ಜಿಲ್ಲೆಗಳಿಗೆ ಮಾದರಿಯಾಗಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಂಟಿ ಕಾರ್ಯದರ್ಶಿ ಲವ ಅಗರ್‍ವಾಲ್ ತಿಳಿಸಿದ್ದಾರೆ. 

ಸುದ್ದಿಗೋಷ್ಟಿಯಲ್ಲಿ ಮಾತನಾಡಿರುವ ಅವರು, ಸೋಂಕು ನಿಯಂತ್ರಣ ಕ್ರಮಗಳ ಅಂಗವಾಗಿ ಬೆಂಗಳೂರು ಮತ್ತು ತುಮಕೂರು ಸ್ಮಾರ್ಟ್ ಸಿಟಿ ಅಭಿಯಾನದಡಿ ಕ್ವಾರಂಟೈನ್‍ನಲ್ಲಿರುವವರ ಮೇಲೆ ಕಣ್ಗಾವಲು ಹಾಕುವ, ಅವರ ಚಟುವಟಿಕೆಗಳನ್ನು ಸಮಗ್ರವಾಗಿ ಪರಿಶೀಲಿಸುವ ಸ್ಮಾರ್ಟ್ ತಂತ್ರಜ್ಞಾನವನ್ನು ಅಳವಡಿಸಿಕೊಂಡು ದೇಶಕ್ಕೆ ಮಾದರಿಯಾಗಿವೆ. ಇದರ ಜೊತೆಗೆ ಸೂರತ್ ಹಾಗೂ ಪುಣೆ ನಗರಗಳು ಇದೇ ತಂತ್ರಜ್ಞಾನವನ್ನು ಅಳವಡಿಸಿಕೊಂಡಿವೆ ಎಂದು ಮಾಹಿತಿ ನೀಡಿದ್ದಾರೆ.

ಹೋಮ್ ಕ್ವಾರಂಟೈನ್‍ನಲ್ಲಿರುವವರ ನಿರ್ವಹಣೆ, ನಿಗಾ, ಪತ್ತೆ ಹಚ್ಚುವ, ಮಾಹಿತಿ ಪ್ರಸರಣ, ತರಬೇತಿ ನೀಡುವ, ವಿಶ್ಲೇಷಣೆ ಮಾಡುವ, ಕೌನ್ಸಲಿಂಗ್ ಸೌಲಭ್ಯ ಮತ್ತಿತರ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ದಿಗ್ಬಂಧನದಲ್ಲಿರುವವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಕೋವಿಡ್ 19 ಪ್ರಕರಣಗಳನ್ನು ದೇಶದಲ್ಲಿ ಮೂರು ಹಂತಗಳನ್ನಾಗಿ ವಿಂಗಡಿಸಲಾಗಿದೆ. ವಸತಿ ನಿಲಯಗಳು, ಕ್ರೀಡಾಂಗಣಗಳಂತಹ ಪ್ರದೇಶಗಳಲ್ಲಿ ಮೊದಲ ಹಂತದ ಪ್ರಕರಣಗಳನ್ನು ನಿರ್ವಹಣೆ ಮಾಡಲಾಗುತ್ತಿದೆ. ಎರಡನೇ ಹಂತದ ಕೇಂದ್ರಗಳು ಸಂಪೂರ್ಣವಾಗಿ ಉನ್ನತ ಚಿಕಿತ್ಸೆಗೆ ಮೀಸಲಾಗಿದ್ದು, ಇದಕ್ಕಾಗಿ ಆಸ್ಪತ್ರೆಗಳನ್ನು ಮೀಸಲಿಡಲಾಗಿದೆ. ತೀವ್ರ ಸಂಕೀರ್ಣ ಪರಿಸ್ಥಿತಿಯಲ್ಲಿರುವವರಿಗೆ ವೆಂಟಿಲೇಟರ್ ಸೇರಿದಂತೆ ಉನ್ನತ ತಂತ್ರಜ್ಞಾನದ ಮೂಲಕ ಚಿಕಿತ್ಸೆ ಒದಗಿಸಲಾಗುತ್ತಿದೆ ಎಂದು ಅವರು ಸ್ಪಷ್ಟ ಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News