ಕೋಮು ಸೌಹಾರ್ದತೆಗೆ ಧಕ್ಕೆ: ಕಿಡಿಗೇಡಿಗಳ ಮೇಲೆ ಪೊಲೀಸರ ಹದ್ದಿನ ಕಣ್ಣು!

Update: 2020-04-08 18:18 GMT

ಬೆಂಗಳೂರು, ಎ.8: ಕೊರೋನ ವೈರಸ್ ಸಂಬಂಧ ನಕಲಿ ಸಂದೇಶಗಳು, ಸುದ್ದಿಗಳನ್ನು ಹರಿಬಿಟ್ಟು ಕೋಮು ಸೌಹಾರ್ದತೆಗೆ ಧಕ್ಕೆಯುಂಟು ಮಾಡಲು ಮುಂದಾಗಿರುವ ಕಿಡಿಗೇಡಿಗಳ ಮೇಲೆ ರಾಜ್ಯದ ಪೊಲೀಸ್ ಇಲಾಖೆ ಹದ್ದಿನ ಕಣ್ಣಿಟ್ಟಿದೆ.

ಸ್ಥಳೀಯ ಮಟ್ಟದಲ್ಲಿ ನಕಲಿ ಸುದ್ದಿ, ಚಿತ್ರ ಮತ್ತು ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಕೋಮು ಗಲಭೆಗೆ ಪ್ರಚೋದನೆ ನೀಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಈಗಾಗಲೇ ರಾಜ್ಯ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು, ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಸೂಚನೆ ನೀಡಿದ್ದಾರೆ.

ಪ್ರಕಟನೆ: ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಜಾತಿ, ಧರ್ಮಕ್ಕೆ ಸೇರಿದಂತಹ ಕೋಮು ದ್ವೇಷದ ಸಂದೇಶಗಳನ್ನು ಹರಡುವವರ ವಿರುದ್ಧ ಪೊಲೀಸ್ ಇಲಾಖೆ ಗಂಭೀರವಾಗಿ ಕ್ರಮ ಕೈಗೊಳ್ಳಲಿದೆ. ಅಷ್ಟೇ ಅಲ್ಲದೆ, ತಪ್ಪಿತಸ್ಥರ ಮೇಲೆ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿ ತುರ್ತು ಕ್ರಮ ಕೈಗೊಳ್ಳಲಾಗುವುದು ಎಂದು ಆಯಾ ಜಿಲ್ಲೆಗಳಲ್ಲಿ ಪೊಲೀಸ್ ಅಧೀಕ್ಷರು ಈಗಾಗಲೇ ಎಚ್ಚರಿಕೆ ನೀಡಿ ಸಾರ್ವಜನಿಕ ಪ್ರಕಟನೆಯನ್ನು ಹೊರಡಿಸಿದ್ದಾರೆ.

ಮುಖಂಡರ ಮನವಿ: ವಿವಿಧ ಸಂಘಟನೆಗಳ ಮುಖಂಡರು, ಪಕ್ಷದ ನಾಯಕರು ಸೇರಿದಂತೆ ಹಲವು ಜನರು ಈಗಾಗಲೇ ಆಯಾ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿ, ಕೋಮು ಪ್ರಚೋದನೆ ನಡೆಸುವವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.

ಹೊರಟ್ಟಿ ಮನವಿ
ಕೊರೋನ ವೈರಸ್ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸಿ ಸಮಾಜದ ಕೋಮು ಸಾಮರಸ್ಯಕ್ಕೆ ಧಕ್ಕೆ ಉಂಟು ಮಾಡುತ್ತಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಮಾಜಿ ಸಚಿವ ಬಸವರಾಜ ಹೊರಟ್ಟಿ ನೇತೃತ್ವದ ನಿಯೋಗ ಧಾರವಾಡ ಜಿಲ್ಲಾಧಿಕಾರಿ ಹಾಗೂ ಲೀಸ್ ಆಯುಕ್ತರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News