ಚೆಕ್‍ಪೋಸ್ಟ್ ನಲ್ಲಿ ತಡೆಯುವ ಭಯ: ಈಜಿ ಊರು ಸೇರಲು ನದಿಗೆ ಜಿಗಿದ ವ್ಯಕ್ತಿ ಮೃತ್ಯು

Update: 2020-04-09 12:08 GMT
ಸಾಂದರ್ಭಿಕ ಚಿತ್ರ

ವಿಜಯಪುರ, ಎ.9: ವ್ಯಕ್ತಿಯೊಬ್ಬರು ಲಾಕ್‍ಡೌನ್ ಹಿನ್ನೆಲೆ ತನ್ನನ್ನು ಚೆಕ್‍ ಪೋಸ್ಟ್ ನಲ್ಲಿ ತಡೆಯುತ್ತಾರೆ ಎಂದು ಭಾವಿಸಿ ಕೃಷ್ಣಾ ನದಿಗೆ ಜಿಗಿದು, ಈಜಿ ಊರು ಸೇರುವ ಸಾಹಸ ಮಾಡಲು ಹೋಗಿ ಜೀವ ಕಳೆದುಕೊಂಡ ಘಟನೆ ನಡೆದಿದೆ.

ವಿಜಯಪುರದ ಮುದ್ದೇಬಿಹಾಳ ತಾಲೂಕಿನ ತಂಗಡಗಿ ಗ್ರಾಮದ ಕೃಷ್ಣಾ ನದಿ ಸೇತುವೆ ಬಳಿ ಸೋಮವಾರ ಈ ಘಟನೆ ನಡೆದಿದ್ದು, ಬುಧವಾರ ಮೃತದೇಹ ಪತ್ತೆಯಾಗಿದೆ.

ಬಾಗಲಕೋಟೆಯ ಹುನಗುಂದ ತಾಲೂಕಿನ ಹುಲ್ಲಳ್ಳಿ ಗ್ರಾಮದ ಮಲ್ಲಪ್ಪ ನಿಂಗಪ್ಪ ಬೊಮ್ಮಣಗಿ(45) ಮೃತ ವ್ಯಕ್ತಿ. ಮಲ್ಲಪ್ಪ ತನ್ನ ಪತ್ನಿಯನ್ನ ನೋಡಿಕೊಂಡು ಬರಲು ಮುದ್ದೇಬಿಹಾಳ ತಾಲೂಕಿನ ಸರೂರ ಗ್ರಾಮಕ್ಕೆ ಹೋಗಿದ್ದರು. ಬಳಿಕ ವಾಪಸ್ ತನ್ನ ಗ್ರಾಮ ಹುಲ್ಲಳ್ಳಿಗೆ ಹೊರಟಿದ್ದರು. ಆದರೆ, ಕೊರೋನ ನಿಯಂತ್ರಿಸುವ ಸಲುವಾಗಿ ಗಡಿಯಲ್ಲಿ ಚೆಕ್ ಪೋಸ್ಟ್ ಹಾಕಿ ಜನರು ಓಡಾಡೋದನ್ನ ನಿಯಂತ್ರಿಸಲಾಗಿದೆ. ಇದನ್ನು ತಿಳಿದಿದ್ದ ಮಲ್ಲಪ್ಪ ತನ್ನನ್ನು ಚೆಕ್‍ ಪೋಸ್ಟ್ ನಲ್ಲಿ ಬಿಡುವುದಿಲ್ಲ ಎಂದು ತಿಳಿದು ನದಿಯಲ್ಲಿ ಈಜಿ ದಡ ಸೇರುವ ವಿಶ್ವಾಸದಿಂದ ಸೋಮವಾರ ನದಿಗೆ ಜಿಗಿದಿದ್ದರು. ಆದರೆ, ಈಜು ಬಾರದ ಕಾರಣ ನದಿಯಲ್ಲಿ ಮುಳುಗಿ ಪ್ರಾಣ ಕಳೆದುಕೊಂಡಿದ್ದಾರೆ. ಬುಧವಾರ ಅವರ ಮೃತದೇಹ ಅಮರಗೋಳ ಗ್ರಾಮದ ಬಳಿ ಪತ್ತೆಯಾಗಿದೆ.

ಸ್ಥಳಕ್ಕೆ ಸಿಪಿಐ ಆನಂದ ವಾಗ್ಮೋಡೆ ಮತ್ತು ಪಿಎಸ್‍ಐ ಮಲ್ಲಪ್ಪ ಮಡ್ಡಿ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News