ಕಲಬುರಗಿಯ ಖಾಸಗಿ ಆಸ್ಪತ್ರೆ ಬಂದ್ ಮಾಡಿಸಿದ ಜಿಲ್ಲಾಧಿಕಾರಿ: ಕಾರಣ ಏನು ಗೊತ್ತೇ ?

Update: 2020-04-09 12:11 GMT
ಜಿಲ್ಲಾಧಿಕಾರಿ ಶರತ್ 

ಕಲಬುರಗಿ, ಎ.9: ಕೊರೋನ ವೈರಸ್ ಲಕ್ಷಣವುಳ್ಳ ರೋಗಿ ಬಗ್ಗೆ ಸರಿಯಾದ ಮಾಹಿತಿ ನೀಡದ ಹಾಗೂ ದಾಖಲೆಗಳನ್ನು ಸಮರ್ಪಕವಾಗಿ ನಿರ್ವಹಿಸದ ಕಾರಣಕ್ಕೆ ನಗರದ ಸ್ಟಾರ್ (ಖಾಸಗಿ) ಆಸ್ಪತ್ರೆಯನ್ನು ಜಿಲ್ಲಾಧಿಕಾರಿ ಶರತ್ ಬಂದ್ ಮಾಡಿಸಿದ್ದಾರೆ. ಅಲ್ಲದೆ ಖಾಸಗಿ ಆಸ್ಪತ್ರೆಗಳ ವೈದ್ಯರು ಹಾಗೂ ನರ್ಸ್ ಕರ್ತವ್ಯದಿಂದ ನುಣುಚಿಕೊಳ್ಳುವ ಪ್ರಯತ್ನ ಮಾಡಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

ನಗರದಲ್ಲಿ ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಮೇಲೆ ಹಲ್ಲೆ ಮಾಡುವ ಪ್ರಯತ್ನ ನಡೆದಿದ್ದು ಗಮನಕ್ಕೆ ಬಂದಿದೆ. ಇದು ಜಿಲ್ಲಾಡಳಿತದ ಮೇಲೆ ನಡೆದ ಹಲ್ಲೆ ಎಂದು ಭಾವಿಸಿದ್ದೇವೆ. ಸಾರ್ವಜನಿಕರು ಕಾರ್ಯಕರ್ತೆಯರಿಗೆ ಸಹಕರಿಸಬೇಕು. ಇದಕ್ಕೆ ವಿರುದ್ಧವಾಗಿ ಕರ್ತವ್ಯಕ್ಕೆ ಅಡ್ಡಿಪಡಿಸಿ, ಹಲ್ಲೆ ಮಾಡಿದರೆ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ದಿಲ್ಲಿಯ ತಬ್ಲೀಗ್ ಜಮಾತ್‍ನಲ್ಲಿ ಭಾಗಿಯಾಗಿ ಬಂದವರು ಮಾಹಿತಿ ನೀಡಬೇಕು. ಈ ವಿಚಾರವನ್ನು ಮುಚ್ಚಿಡದೆ ಮುಕ್ತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ವಿದೇಶದಿಂದ ಬಂದವರ ವೈದ್ಯಕೀಯ ದಿಗ್ಬಂಧನದ ಅವಧಿ ಮುಗಿದರೂ ಸಹ ಅವರು ಹೊರಗಡೆ ಓಡಾಡಬಾರದು. ಇನ್ನೂ 14 ದಿನ ಮನೆಯಲ್ಲಿಯೇ ಇರಬೇಕು ಎಂದು ಅವರು ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News