ಕೋಮುದ್ವೇಷ ಹರಡುವುದು ಅಕ್ಷಮ್ಯ ಅಪರಾಧ: ಜನವಾದಿ ಮಹಿಳಾ ಸಂಘಟನೆ

Update: 2020-04-09 12:58 GMT

ಬೆಂಗಳೂರು, ಎ.9: ಕೊರೋನದಂತಹ ಜೀವಘಾತುಕ ಮಹಾರೋಗದ ವಿರುದ್ಧ ಇಡೀ ಜಗತ್ತು ಒಗ್ಗಟ್ಟಾಗಿ ನಿಂತು ವೈಜ್ಞಾನಿಕ ಮತ್ತು ಶುದ್ಧ ಮಾನವೀಯ ನೆಲೆಯಲ್ಲಿ ಇದನ್ನು ಎದುರಿಸಿ ಹಿಮ್ಮೆಟಿಸಬೇಕಿದೆ. ಇಂತಹ ಸೂಕ್ಷ್ಮ ಹೊತ್ತಲ್ಲಿಯೂ ಕ್ಷುಲ್ಲಕ ರಾಜಕಾರಣ ಮಾಡುತ್ತ ಕೋಮುದ್ವೇಷವನ್ನು ಹರಡುವುದು ಅಕ್ಷಮ್ಯ ಅಪರಾಧವಾಗುತ್ತದೆ ಎಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಆಕ್ರೋಶ ವ್ಯಕ್ತಪಡಿಸಿದೆ.

ತಬ್ಲೀಗ್ ಮರ್ಕಝ್‍ನಲ್ಲಿ ಸಂಭವಿಸಿದ ಅವಘಡವನ್ನು ಯಾರೂ ಸಮರ್ಥಿಸಬೇಕಿಲ್ಲ. ಆ ಸಮಾವೇಶವನ್ನು ಸಂಘಟಿಸಿದವರು ಒಂದಿಷ್ಟು ಎಚ್ಚರಿಕೆಯನ್ನು ವಹಿಸಲೇಬೇಕಾಗಿತ್ತು ಎನ್ನುವುದನ್ನು ಎಲ್ಲರೂ ಒಪ್ಪಬೇಕು. ಅವಘಡವಾಗಿದೆ. ಅದರಿಂದ ಹೊರಬರುವ ದಾರಿಗಾಗಿ ಎಲ್ಲರೂ ಜವಾಬ್ದಾರಿಯಿಂದ ವರ್ತಿಸಬೇಕಿದೆ ಎಂದು ಸಂಘಟನೆಯ ಅಧ್ಯಕ್ಷೆ ದೇವಿ ಹಾಗೂ ಪ್ರಧಾನ ಕಾರ್ಯದರ್ಶಿ ಗೌರಮ್ಮ ತಿಳಿಸಿದ್ದಾರೆ.

ದುರಂತವೆಂದರೆ, ಕೋಮುವಾದಿಗಳು ಈ ಘಟನೆಯನ್ನು ಮುಸ್ಲಿಮ್ ವಿರೋಧಿ ಅಲೆಯಾಗಿ ಹಬ್ಬಿಸುತ್ತಿದ್ದಾರೆ. ಇದು ಸಂವಿಧಾನ ವಿರೋಧಿ ನಡೆಯಾಗಿದೆ. ಇದನ್ನು ಪ್ರಜ್ಞಾವಂತರು ಮತ್ತು ಸಾಮರಸ್ಯ, ಸಹಬಾಳ್ವೆಯ ಶಾಂತ ಸಮಾಜವನ್ನು ಬಯಸುವ ಎಲ್ಲರೂ ಖಂಡಿಸಬೇಕು ಎಂದು ಅವರು ಹೇಳಿದ್ದಾರೆ.

ತಬ್ಲೀಗ್ ಜಮಾಅತ್‍ನವರು ಇಡೀ ದೇಶದ ಮುಸ್ಲಿಮರ ಪ್ರತಿನಿಧಿಗಳಲ್ಲ. ತಪ್ಪಿತಸ್ಥರನ್ನು ತಪ್ಪಿತಸ್ಥರೆಂದು ಕರೆದು ಅಂಥ ಮೂರ್ಖರನ್ನು ಪತ್ತೆ ಹಚ್ಚಿ ಈ ನೆಲದ ಕಾನೂನಿಗೆ ಒಳಪಡಿಸಿ ಶಿಕ್ಷಿಸಬೇಕು. ಆದರೆ, ಮುಸ್ಲಿಮ್ ಸಮುದಾಯವನ್ನೆ ಭಯೋತ್ಪಾದಕರಂತೆ ಬಿಂಬಿಸುವುದು, ಅವರ ಬಗೆಗೆ ದ್ವೇಷ ಮಡುಗುಟ್ಟುವಂತೆ ಮಾಡುವುದು ಸಲ್ಲದು ಎಂದು ಅವರು ತಿಳಿಸಿದ್ದಾರೆ.

ಈಗಾಗಲೆ ವಾಟ್ಸ್ ಆ್ಯಪ್ ಯೂನಿವರ್ಸಿಟಿಯಲ್ಲಿ ಮುಸ್ಲಿಮರ ಕುರಿತು ನೂರಾರು ಫೇಕ್ ವಿಡಿಯೋಗಳನ್ನು ಹರಿಬಿಡಲಾಗುತ್ತಿದೆ. ಮಿಡಿಯಾಗಳಂತು ಉತ್ಪ್ರೇಕ್ಷಿತ ಹೇಳಿಕೆಗಳನ್ನು ಪುಂಖಾನುಪುಂಖವಾಗಿ ಪ್ರಸಾರ ಮಾಡುತ್ತಿವೆ. ಈ ಜನಾಂಗೀಯ ದ್ವೇಷವು ಕೊರೋನಕ್ಕಿಂತ ಭಯಾನಕ ರೋಗವಾಗಿ ಪರಿಣಮಿಸುತ್ತಿದೆ. ದೈಹಿಕ ರೋಗದಿಂದ ಇಂದಲ್ಲ ನಾಳೆ ಗುಣಮುಖರಾಗುತ್ತೇವೆ. ಆದರೆ, ಧರ್ಮದ್ವೇಷದ ಮಾನಸಿಕ ರೋಗದಿಂದ ಮುಕ್ತರಾಗುವುದು ಅಷ್ಟು ಸುಲಭವಲ್ಲ ಎಂದು ಅವರು ಹೇಳಿದ್ದಾರೆ.

ಮುಸ್ಲಿಮರಿಂದ ಯಾರೂ ಏನೂ ಖರೀದಿಸಬಾರದು. ಅವರನ್ನು ಮನೆಯ ಬಳಿ ಸುಳಿಯಗೊಡಬಾರದು. ಎಲ್ಲ ಕೆಲಸಗಳಿಂದ ದೂರವಿಡಬೇಕು. ಯಾವುದೇ ರೀತಿಯ ಸಂಪರ್ಕ ಇಟ್ಟುಕೊಳ್ಳಬಾರದು ಎಂಬಂತಹ ಹೇಳಿಕೆಗಳು ಫೇಸ್‍ಬುಕ್, ವಾಟ್ಸ್ ಆ್ಯಪ್‍ಗಳಲ್ಲಿ ಎಗ್ಗಿಲ್ಲದೆ ಹರಿದಾಡುತ್ತಿವೆ. ಕೆಲವರಂತೂ ಅವರನ್ನು ಗುಂಡಿಟ್ಟು ಕೊಲ್ಲಬೇಕು ಎಂಬಷ್ಟರ ಮಟ್ಟಿನ ಉಗ್ರ ಹೇಳಿಕೆಗಳನ್ನು ಹರಿ ಬಿಡುತ್ತಿದ್ದಾರೆ ಎಂದು ದೇವಿ ಮತ್ತು ಗೌರಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ಅಂತಹ ಭಿತ್ತಿಪತ್ರಗಳನ್ನು ಅಂಟಿಸಿರುವ ಸುದ್ದಿಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ. ಸ್ಥಳೀಯ ಜಿಲ್ಲಾಡಳಿತ ಹಾಗೂ ಮುಖ್ಯಮಂತ್ರಿ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ತಕ್ಷಣ ಈ ವಿಷಕಾರಕ ಮನಸ್ಸುಗಳನ್ನು ನಿಯಂತ್ರಣಕ್ಕೆ ತರಲು ಕ್ರಮ ಕೈಗೊಳ್ಳಬೇಕು ಎಂದು ಅವರು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News