ಕೊರೋನ ಹಿನ್ನೆಲೆ: ರಾಜ್ಯದ ಶಾಸಕರು, ಸಚಿವರ ವೇತನದಲ್ಲಿ ಶೇ.30ರಷ್ಟು ಕಡಿತ

Update: 2020-04-09 14:37 GMT

ಬೆಂಗಳೂರು, ಎ. 9: ರಾಜ್ಯದಲ್ಲಿ ಕೊರೋನ ವೈರಸ್ ಸೋಂಕು ನಿಯಂತ್ರಣ ದೃಷ್ಟಿಯಿಂದ ಶಾಸಕರು ಮತ್ತು ಸಚಿವರ ವೇತನದಲ್ಲಿ ಶೇ.30ರಷ್ಟು ಕಡಿತಗೊಳಿಸಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ. ಇದರಿಂದ ಉಳಿತಾಯವಾಗುವ 15.36 ಕೋಟಿ ರೂ.ಗಳನ್ನು ಕೊರೋನ ಸಂಬಂಧದ ಸಿಎಂ ಪರಿಹಾರ ನಿಧಿಗೆ ನೀಡಲು ನಿರ್ಧರಿಸಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರ ಖಾತೆ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದ್ದಾರೆ.

ಗುರುವಾರ ಮುಖ್ಯಮಂತ್ರಿ ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಜರುಗಿದ ಸಚಿವ ಸಂಪುಟ ಸಭೆಯ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸ್ಪೀಕರ್ ಮತ್ತು ಉಪ ಸಭಾಧ್ಯಕ್ಷರುಗಳ ವೇತನ ಕಡಿತ ಮಾಡಲಾಗುವುದು. ಇದಕ್ಕೆ ಎಲ್ಲ ಪಕ್ಷಗಳ ನಾಯಕರು ಒಪ್ಪಿಗೆ ನೀಡಿದ್ದಾರೆ. ವೇತನ ಕಡಿತದಿಂದ ಉಳಿತಾಯ ಆಗುವ ಹಣವನ್ನು ಬಳಕೆ ಮಾಡುವ ಸಂಬಂಧ ಸುಗ್ರಿವಾಜ್ಞೆ ಹೊರಡಿಸಲಾಗುವುದು ಎಂದರು.

ಕೊರೋನ ವೈರಸ್ ಸೋಂಕಿನಿಂದ ಆಗಿರುವ ಲಾಕ್‍ಡೌನ್ ಹಿನ್ನೆಲೆಯಲ್ಲಿ ಸರಕು ಮತ್ತು ಸೇವಾ ತೆರಿಗೆ(ಜಿಎಸ್ಟಿ) ಪಾವತಿ ಅವಧಿಯನ್ನು ಜೂನ್ 30ರ ವರೆಗೆ ವಿಸ್ತರಿಸಲಾಗಿದೆ. ಅಲ್ಲದೆ, ಲಾಕ್‍ಡೌನ್ ಹಿನ್ನೆಲೆಯಲ್ಲಿ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಸಿಗದೆ ಸಂಕಷ್ಟಕ್ಕೆ ಸಿಲುಕಿರುವ ಹೂ ಬೆಳೆಯುವ ರೈತರಿಗೆ ಸೂಕ್ತ ಪರಿಹಾರ ನೀಡಲು ನಿರ್ಧರಿಸಲಾಗಿದೆ ಎಂದು ಮಾಧುಸ್ವಾಮಿ ತಿಳಿಸಿದರು.

ರಾಜ್ಯದಲ್ಲಿ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿ ವಿಲೇವಾರಿಯಾಗದೆ ಬಾಕಿ ಇದ್ದ 2 ಲಕ್ಷಕ್ಕೂ ಅಧಿಕ ಮಂದಿಗೆ ತಾತ್ಕಾಲಿಕವಾಗಿ ಎರಡು ತಿಂಗಳ ಕಾಲ ಪಡಿತರ ನೀಡಲಾಗುವುದು. ಪಡಿತರ ಚೀಟಿದಾರರಿಗೆ ಯಾವುದೆ ನ್ಯಾಯಬೆಲೆ ಅಂಗಡಿಗಳ ಮಾಲಕರು ಇನ್ನಿತರ ವಸ್ತುಗಳನ್ನು ಮಾರಾಟ ಮಾಡಲು ಯತ್ನಿಸಿದರೆ ಅವರ ಪರವಾನಗೆ ರದ್ದು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ರಾಜ್ಯದಲ್ಲಿ ಈಗಾಗಲೇ ಶೇ.50ರಷ್ಟು ಪಡಿತರ ವಿತರಣೆ ಮಾಡಲಾಗಿದ್ದು ಇನ್ನೂ ಒಂದೆರಡು ದಿನಗಳಲ್ಲಿ ಎಲ್ಲರಿಗೂ ಪಡಿತರ ವಿತರಣೆಯಾಗಲಿದೆ. ಅಲ್ಲದೆ, ಇದೇ ಮೊದಲ ಬಾರಿಗೆ ಓಟಿಪಿ ಇಲ್ಲದೆ ಪಡಿತರ ನೀಡಲಾಗಿದೆ. ವಲಸೆ ಮತ್ತು ಕೂಲಿ ಕಾರ್ಮಿಕರಿಗೆ ಎಲ್ಲ ಕಡೆಗಳಲ್ಲಿ ಊಟ ಮತ್ತು ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.

ಕುಡಿಯುವ ನೀರಿಗೆ ವ್ಯವಸ್ಥೆ: ರಾಜ್ಯದ 49 ತಾಲೂಕುಗಳನ್ನು ಕೇಂದ್ರ ಸರಕಾರದ ಮಾರ್ಗಸೂಚಿ ಅನ್ವಯ ಈಗಾಗಲೇ ಬರ ಪೀಡಿತ ತಾಲೂಕುಗಳೆಂದು ಘೋಷಣೆ ಮಾಡಿದ್ದು, ಕುಡಿಯುವ ನೀರು ಪೂರೈಕೆ ಸೇರಿ ತುರ್ತು ಅಗತ್ಯಗಳಿಗಾಗಿ ತಲಾ 1 ಕೋಟಿ ರೂ.ಗಳನ್ನು ಆ ತಾಲೂಕುಗಳಿಗೆ ಬಿಡುಗಡೆ ಮಾಡಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.

ರಾಜ್ಯದ ಬರ ಪೀಡಿತ ಆರು ಜಿಲ್ಲೆಗಳ ಒಟ್ಟು 271 ಗ್ರಾಮಗಳಿಗೆ ಟ್ಯಾಂಕರ್ ಗಳ ಮೂಲಕ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದ್ದು, ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ ಒಟ್ಟು 1,054 ಕೋಟಿ ರೂ.ಗಳಷ್ಟು ಹಣವಿದೆ. ಹೀಗಾಗಿ ಯಾವುದೇ ಗ್ರಾಮದಲ್ಲಿ ಬೇಸಿಗೆ ಸಂದರ್ಭದಲ್ಲಿ ಕುಡಿಯುವ ನೀರಿನ ಅಭಾವ ಉಂಟಾಗದಂತೆ ಸೂಕ್ತ ಮುನ್ನಚ್ಚರಿಕೆ ವಹಿಸಲು ನಿರ್ದೇಶನ ನೀಡಲಾಗಿದೆ ಎಂದು ಅವರು ತಿಳಿಸಿದರು.

ಸಂಪುಟ ಸಭೆಯ ಬಳಿಕ ಬರ ಪರಿಹಾರ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಸಂಪುಟ ಉಪ ಸಮಿತಿ ಸಭೆ ನಡೆಸಿದ್ದು, ಗ್ರಾಮೀಣ ಪ್ರದೇಶ ಸೇರಿದಂತೆ ಎಲ್ಲಿಯೂ ಕುಡಿಯುವ ನೀರಿನ ಸಮಸ್ಯೆ ಉದ್ಬವಿಸದಂತೆ ಸರಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದ ಅವರು, ಕೊಳವೆ ಬಾವಿ ಕೊರೆಸುವುದು ಸೇರಿದಂತೆ ತಾತ್ಕಾಲಿಕವಾಗಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಸರಕಾರ ಕ್ರಮ ವಹಿಸಲಿದೆ ಎಂದು ಹೇಳಿದರು.

ಕರ್ನಾಟಕ ವಿಧಾನ ಮಂಡಲದ ವೇತನಗಳು, ನಿವೃತ್ತಿ ವೇತನಗಳು ಮತ್ತು ಭತ್ತೆಗಳು ಮತ್ತು ಇತರೆ ಕೆಲವು ಕಾನೂನು (ತಿದ್ದುಪಡಿ) ಆಧ್ಯಾದೇಶ-2020ಕ್ಕೆ ಸಂಪುಟ ಒಪ್ಪಿಗೆ ನೀಡಿದೆ. ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ(ತಿದ್ದುಪಡಿ)-2020ಕ್ಕೆ ಅನುಮೋದನೆ ನೀಡಲಾಯಿತು. ಕರ್ನಾಟಕ ಭೂ ಕಬಳಿಕೆ ನಿಷೇಧ(ತಿದ್ದುಪಡಿ) ಆಧ್ಯಾದೇಶ-2020ಕ್ಕೆ ಸಂಪುಟ ಸಮ್ಮತಿಸಿದೆ

-ಜೆ.ಸಿ.ಮಾಧುಸ್ವಾಮಿ ಕಾನೂನು ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News