ರಾಜ್ಯದಲ್ಲಿ 2,658 ಐಸೋಲೇಷನ್ ಬೆಡ್ ಗಳನ್ನು ಕಾಯ್ದಿರಿಸಲಾಗಿದೆ: ಹೈಕೋರ್ಟ್ ಗೆ ಸರಕಾರದ ಹೇಳಿಕೆ

Update: 2020-04-09 16:17 GMT

ಬೆಂಗಳೂರು, ಎ.9: ಕೊರೋನ ವೈರಸ್ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಮಾಸ್ಕ್, ಪಿಪಿಇ, ಸ್ಯಾನಿಟೈಸರ್ ಹಾಗೂ ವೆಂಟಿಲೇಟರ್ ಬೇಡಿಕೆ ಎಷ್ಟಿದೆ ಎಂಬುದರ ಬಗ್ಗೆ ಸಂಪೂರ್ಣ ವಿವರ ನೀಡಲು ಹೈಕೋರ್ಟ್ ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಿದೆ.

ಈ ಕುರಿತು ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ನೇತೃತ್ವದ ವಿಭಾಗೀಯ ನ್ಯಾಯಪೀಠ, ಈ ನಿರ್ದೇಶನ ನೀಡಿದೆ.

ಸರಕಾರದ ಪರ ವಾದಿಸಿದ ಹೆಚ್ಚುವರಿ ಅಡ್ವಕೇಟ್ ಜನರಲ್, ಸರಕಾರಿ ಆಸ್ಪತ್ರೆಗಳಲ್ಲಿ 1,114, ಖಾಸಗಿ ಆಸ್ಪತ್ರೆಗಳಲ್ಲಿ 1,544 ಸೇರಿ ಒಟ್ಟು 2,658 ಐಸೋಲೇಷನ್ ಬೆಡ್‍ಗಳನ್ನು ಕಾಯ್ದಿರಿಸಲಾಗಿದೆ. 2.40 ಲಕ್ಷ ಎನ್-95 ಮಾಸ್ಕ್, 6.94 ಲಕ್ಷ ತ್ರಿಬಲ್ ಲೇಯರ್ ಮಾಸ್ಕ್, 53 ಸಾವಿರ ಪಿಪಿಇ ಕಿಟ್‍ಗಳು ಕರ್ನಾಟಕ ಡ್ರಗ್ ಲಾಜಿಸ್ಟಿಕ್ ಅಂಡ್ ವೇರ್ ಹೌಸಿಂಗ್ ಸೊಸೈಟಿಯಲ್ಲಿ ಸ್ಟಾಕ್ ಇದೆ. 324 ವೆಂಟಿಲೇಟರ್, 18.33 ಲಕ್ಷ ಎನ್-95 ಮಾಸ್ಕ್, 54 ಲಕ್ಷ ತ್ರಿಬಲ್ ಲೇಯರ್ ಮಾಸ್ಕ್, 10 ಲಕ್ಷ ಪಿಪಿಇ ಕಿಟ್ಸ್, 25 ಸಾವಿರ ಹ್ಯಾಂಡ್ ಸ್ಯಾನಿಟೈಸರ್ ಬಾಟಲ್‍ಗಳ ಖರೀದಿಗೆ ಆದೇಶಗಳನ್ನು ಹೊರಡಿಸಲಾಗಿದೆ ಎಂದು ಪೀಠಕ್ಕೆ ತಿಳಿಸಿದರು.

ರಾಜ್ಯದಲ್ಲಿ 332 ಖಾಸಗಿ, 206 ಸರಕಾರಿ ಆಸ್ಪತ್ರೆಗಳೂ ಸೇರಿ 537 ಐಸೋಲೇಷನ್ ಆಸ್ಪತ್ರೆಗಳನ್ನು ಗುರುತಿಸಲಾಗಿದೆ ಎಂಬ ಅಂಶವನ್ನು ಸರಕಾರ ನ್ಯಾಯಪೀಠಕ್ಕೆ ವಿವರಿಸಿದೆ. ಬೆಂಗಳೂರಿನಲ್ಲಿ 862 ಐಸೋಲೇಷನ್ ಬೆಡ್‍ಗಳಿವೆ. 740 ವೆಂಟಿಲೇಟರ್ ವ್ಯವಸ್ಥೆ ಹೊಂದಿರುವ ಐಸಿಯು ಬೆಡ್‍ಗಳ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ವಿವರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News