ವಾಟ್ಸ್ ಆ್ಯಪ್, ಫೇಸ್‍ಬುಕ್ ನಲ್ಲಿ ಸುಳ್ಳು ಸುದ್ದಿ ಹರಡುವವರ ವಿರುದ್ಧ ಕಠಿಣ ಕ್ರಮ: ಧಾರವಾಡ ಎಸ್ಪಿ ವರ್ತಿಕಾ ಕಟಿಯಾರ್

Update: 2020-04-09 14:42 GMT

ಧಾರವಾಡ, ಎ.9:  ಸಾಮಾಜಿಕ ಜಾಲತಾಣಗಳಾದ ವಾಟ್ಸ್ ಆ್ಯಪ್, ಫೇಸ್‍ಬುಕ್, ಟೆಲಿಗ್ರಾಮ್, ಧ್ವನಿ ಮೆಸೇಜ್ ಮುಂತಾದವುಗಳ ಮೂಲಕ ಸುಳ್ಳು ಸುದ್ದಿಗಳನ್ನು ಹರಡಿ ಕೋಮುಸಾಮರಸ್ಯಕ್ಕೆ ಧಕ್ಕೆ ತರುವವರ ವಿರುದ್ಧ ಐಪಿಸಿ ಸೆಕ್ಷನ್ ಪ್ರಕಾರ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ್ ಎಚ್ಚರಿಕೆ ನೀಡಿದ್ದಾರೆ.

ನಗರದಲ್ಲಿರುವ ಪೊಲೀಸ್ ಹೆಡ್ ಕ್ವಾರ್ಟರ್ಸ್‍ನಲ್ಲಿರುವ ದುರ್ಗಾದೇವಿ ದೇವಸ್ಥಾನದ ಸಮುದಾಯ ಭವನದಲ್ಲಿ ಜರುಗಿದ ಜಿಲ್ಲೆಯ ವಿವಿಧ ತಾಲೂಕಿನ ಧಾರ್ಮಿಕ ಮುಖಂಡರ, ಧಾರ್ಮಿಕ ಸಂಸ್ಥೆಗಳ ಪ್ರಮುಖರೊಂದಿಗೆ ಶಾಂತಿ ಪಾಲನೆ ಹಾಗೂ ಸಮಾಲೋಚನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕೆಲವು ಜನರು ಸಮಾಜದಲ್ಲಿ ಶಾಂತಿಭಂಗ ಉಂಟುಮಾಡುವಂತಹ ಸುಳ್ಳು ಸುದ್ದಿಗಳನ್ನು ಬಿತ್ತರಿಸುವ, ಫಾರ್ವರ್ಡ್ ಮಾಡುವ ಕೃತ್ಯ ಮಾಡುತ್ತಿದ್ದಾರೆ. ಇಂತವರ ಬಗ್ಗೆ ಯಾವುದೇ ದೂರು ಬಂದಲ್ಲಿ ಅಥವಾ ಪೊಲೀಸ್ ಅಧಿಕಾರಿಗಳ ಗಮನಕ್ಕೆ ಬಂದಲ್ಲಿ ಎನ್‍ಡಿಆರ್‍ಎಫ್ ಕಾಯ್ದೆ ಹಾಗೂ ಐಪಿಸಿ ಸೆಕ್ಷನ್ 188 ಮತ್ತು 295 ಪ್ರಕಾರ ಕ್ರಿಮಿನಲ್ ಪ್ರಕರಣ ದಾಖಲಿಸಿ, ಜೈಲಿಗೆ ಕಳುಹಿಸುವುದಾಗಿ ಅವರು ಸಭೆಯಲ್ಲಿ ಎಚ್ಚರಿಕೆ ನೀಡಿದರು.

ಪ್ರತಿ ಗ್ರಾಮದ ಬೀಟ್ ಹಂತದಿಂದ ಜಿಲ್ಲಾ ಮಟ್ಟದವರೆಗೆ ಬೀಟ್ ಸದಸ್ಯರ, ಧಾರ್ಮಿಕ ಹಾಗೂ ಗ್ರಾಮದ ಪ್ರಮುಖರ, ಸ್ಥಳೀಯ ಜನಪ್ರತಿನಿಧಿಗಳ ಸಭೆ ಜರುಗಿಸಿ ಸರಕಾರದ ನಿರ್ದೇಶನಗಳನ್ನು ಮತ್ತು ಕೊರೋನ ವೈರಸ್ ಹರಡುವ ಗಂಭೀರತೆಯನ್ನು ಮನವರಿಕೆ ಮಾಡಲಾಗಿದೆ. ಪೊಲೀಸ್ ಸಿಬ್ಬಂದಿ ಹಾಗೂ ಅಧಿಕಾರಿಗಳು ಗ್ರಾಮಗಳ ಪ್ರತಿ ಓಣಿ, ಮನೆಗಳಿಗೆ ಸ್ವತಃ ತೆರಳಿ ಮನೆಯಿಂದ ಅನಗತ್ಯವಾಗಿ ಹೊರ ಬರದಂತೆ, ರಸ್ತೆಗೆ ಇಳಿಯದಂತೆ ತಿಳುವಳಿಕೆ ನೀಡುತ್ತಿದ್ದಾರೆ ಎಂದು ಅವರು ಹೇಳಿದರು.

ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯ ಸೂಚನೆಗಳನ್ನು ಪಾಲಿಸದೆ, ಕರ್ತವ್ಯನಿರತ ಅಧಿಕಾರಿಗಳಿಗೆ ಸ್ಪಂದಿಸದಿದ್ದರೆ ಅಂತವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ವರ್ತಿಕಾ ಕಟಿಯಾರ್ ತಿಳಿಸಿದರು.

ಜಿಲ್ಲಾಧಿಕಾರಿ ದೀಪಾ ಚೋಳನ್ ಮಾತನಾಡಿ, ಜಿಲ್ಲೆಯ ಸಾರ್ವಜನಿಕರ ಸುರಕ್ಷತೆಗಾಗಿ ಹಾಗೂ ಅಗತ್ಯ ಸೇವೆಗಳಿಗೆ ತೊಂದರೆ ಆಗದಂತೆ ಜಿಲ್ಲಾಡಳಿತ ಕ್ರಮಕೈಗೊಂಡಿದೆ. ಸಾರ್ವಜನಿಕರು ಸಹಕಾರ ನೀಡಬೇಕು. ಅನಗತ್ಯ ಓಡಾಟ ಮಾಡಬಾರದು. ಪಡಿತರ ವಿತರಣೆ ಆರಂಭವಾಗಿದೆ. ಕಾಯಿಪಲ್ಯ ಸೇರಿದಂತೆ ಎಲ್ಲ ತರಕಾರಿ, ಹಣ್ಣು ಹಂಪಲು ತಮ್ಮ ಮನೆಯ ಬಾಗಿಲಿಗೆ ಬರುವಂತೆ ಜಿಲ್ಲಾಡಳಿತದಿಂದ ಸೂಕ್ತ ವ್ಯವಸ್ಥೆ ಮಾಡಲಾಗಿದೆ ಎಂದರು.

ಕೃಷಿ ಚಟುವಟಿಕೆ, ಮೇವು ಪೂರೈಕೆ ಸೇರಿದಂತೆ ಯಾವುದೇ ಕೃಷಿ ಪೂರಕ ಕಾರ್ಯಗಳಿಗೆ ತಡೆ ಇಲ್ಲ. ಆದರೆ ಸಾಮಾಜಿಕ ಅಂತರ ಕಾಯ್ದುಕೊಂಡು ಕೆಲಸ ಮಾಡಬೇಕು. ಎಲ್ಲ ಧರ್ಮಗಳ ಹಬ್ಬಗಳು ಪ್ರತಿ ವರ್ಷ ಬರುತ್ತವೆ. ಈಗ ಲಾಕ್ ಡೌನ್ ನಿಷೇಧಾಜ್ಞೆ ಇರುವುದರಿಂದ ಮತ್ತು ಕೋವಿಡ್ 19  ವೈರಸ್ ಹರಡದಂತೆ ಕ್ರಮಕೈಗೊಂಡಿರುವುದರಿಂದ ಗುಂಪು ಸೇರಿ ಯಾವುದೆ ಹಬ್ಬಗಳ ಆಚರಣೆ ಬೇಡ, ಇದೊಂದು ಸಲ ತಮ್ಮ ಮನೆಯೊಳಗೆ ಇದ್ದು, ಮನೆಯಲ್ಲಿಯೆ ಹಬ್ಬ ಆಚರಿಸಿ, ಈ ಕೊರೋನ ವಿಷಗಳಿಗೆ, ಅವಧಿ ಮುಗಿದ ಮೇಲೆ ಸರ್ವರೂ ಸೇರಿ ಶಾಂತಿ, ಕೋಮು ಸೌರ್ಹಾದತೆ, ಭಾವೈಕ್ಯತೆಯಿಂದ ಹಬ್ಬಗಳನ್ನು ಆಚರಿಸೋಣ ಎಂದು ವಿನಂತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News