ಉಚಿತ ಕೊರೋನ ಪರೀಕ್ಷೆಯಿಂದ ಭಾರತದ ಹೋರಾಟಕ್ಕೆ ಅಡ್ಡಿ: ಆರೋಗ್ಯ ತಜ್ಞರ ಎಚ್ಚರಿಕೆ

Update: 2020-04-09 16:03 GMT

ಹೊಸದಿಲ್ಲಿ, ಎ.9: ಕೊರೋನ ವೈರಸ್‌ನ ರಾಷ್ಟ್ರೀಯ ಬಿಕ್ಕಟ್ಟಿನ ಸಂದರ್ಭದಲ್ಲಿ ಖಾಸಗಿ ಲ್ಯಾಬ್‌ಗಳು ಲೋಕೋಪಕಾರಿ ಪಾತ್ರವನ್ನು ಹೊಂದಿವೆ ಮತ್ತು ಅವು ಈ ಸಾಂಕ್ರಾಮಿಕ ಪಿಡುಗಿನ ಪರೀಕ್ಷ್ಷಾ ಸೌಲಭ್ಯಗಳನ್ನು ಉಚಿತವಾಗಿ ಒದಗಿಸಬೇಕು ಎಂಬ ಸರ್ವೋಚ್ಚ ನ್ಯಾಯಾಲಯದ ಆದೇಶವು ವೈದ್ಯಕೀಯ ಸಂಸ್ಥೆಗಳ ಮೇಲೆ ಅನ್ಯಾಯವಾಗಿ ಆರ್ಥಿಕ ಹೊರೆಯನ್ನು ಹೊರಿಸುತ್ತದೆ ಮತ್ತು ಈಗಾಗಲೇ ವಿಶ್ವದಲ್ಲಿಯೇ ಕನಿಷ್ಠ ಪ್ರಮಾಣದಲ್ಲಿರುವ ಭಾರತದಲ್ಲಿನ ಕೊರೋನ ವೈರಸ್ ಪರೀಕ್ಷೆಗಳ ಸಂಖ್ಯೆ ಇನ್ನಷ್ಟು ತಗ್ಗಬಹುದು ಎಂದು ಉದ್ಯಮ ರಂಗದ ನೇತಾರರು ಮತ್ತು ಆರೋಗ್ಯ ತಜ್ಞರು ಹೇಳಿದ್ದಾರೆ.

ಭಾರತದಲ್ಲಿಯ ಹಲವಾರು ಉದ್ಯಮಗಳಂತೆ ಖಾಸಗಿ ವೈದ್ಯಕೀಯ ಸಂಸ್ಥೆಗಳೂ ಹಣಕಾಸಿನ ಮುಗ್ಗಟ್ಟನ್ನೆದುರಿಸುತ್ತಿವೆ ಮತ್ತು ಯಾವುದೇ ಆರ್ಥಿಕ ನೆರವಿಲ್ಲದೆ ಪರೀಕ್ಷೆಗಳನ್ನು ನಡೆಸುತ್ತಿದ್ದರೆ ಇನ್ನಷ್ಟು ಸಂಕಷ್ಟಕ್ಕೆ ಸಿಲುಕುತ್ತವೆ ಎಂಬ ಕಳವಳವನ್ನು ಅವರು ವ್ಯಕ್ತಪಡಿಸಿದ್ದಾರೆ.

ಖಾಸಗಿ ಸಂಸ್ಥೆಗಳು ಉಚಿತವಾಗಿ ಕಾರ್ಯ ನಿರ್ವಹಿಸಬೇಕು ಎಂದು ನಿರೀಕ್ಷಿಸಬಾರದು ಎಂದು ಗುರುವಾರ ಟ್ವೀಟ್‌ನಲ್ಲಿ ಹೇಳಿರುವ ಬಯೊಕಾನ್ ಲಿ.ನ ಕಾರ್ಯಾಧ್ಯಕ್ಷೆ ಕಿರಣ್ ಮಜುಮ್ದಾರ್ ಶಾ ಅವರು,ಸರ್ವೋಚ್ಚ ನ್ಯಾಯಾಲಯದ ಆದೇಶವು ಮಾನವೀಯ ಉದ್ದೇಶವನ್ನು ಹೊಂದಿದೆ, ನಿಜ. ಆದರೆ ಅದರ ಜಾರಿಯು ಅವ್ಯಾವಹಾರಿಕವಾಗಿದೆ. ಪರೀಕ್ಷೆಗಳ ಸಂಖ್ಯೆ ಕುಸಿಯಲಿದೆ ಎಂಬ ಆತಂಕ ತನಗಿದೆ.

ಖಾಸಗಿ ಲ್ಯಾಬ್‌ಗಳು ಸಣ್ಣ ಪ್ರಮಾಣದ ಉದ್ಯಮಗಳಾಗಿವೆ ಮತ್ತು ಹೆಚ್ಚಿನ ಲಾಭವನ್ನಿಟ್ಟುಕೊಳ್ಳದೆ ಪರೀಕ್ಷಾ ಸೌಲಭ್ಯಗಳನ್ನು ಒದಗಿಸುತ್ತಿವೆ. ಉಚಿತವಾಗಿ ಪರೀಕ್ಷೆಗಳನ್ನು ನಡೆಸಿದರೆ ಅವು ತಮ್ಮ ಉದ್ಯೋಗಿಗಳಿಗೆ ಸಂಬಳ ನೀಡುವುದು ಹೇಗೆ ಎಂದು ಪ್ರಶ್ನಿಸಿದ್ದಾರೆ.

ಸರಕಾರವು ತಿಳಿಸಿರುವಂತೆ ಪ್ರತಿನಿತ್ಯ ದೇಶದಲ್ಲಿ ಸರಾಸರಿ 15,000 ಕೊರೋನ ವೈರಸ್ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಮುಂದಿನ ಕೆಲವು ದಿನಗಳಲ್ಲಿ ಈ ಸಂಖ್ಯೆಯನ್ನು 20,000ಕ್ಕೆ ಮತ್ತು ಬಿಕ್ಕಟ್ಟು ತೀವ್ರಗೊಂಡರೆ ಅಂತಿಮವಾಗಿ ಒಂದು ಲಕ್ಷಕ್ಕೆ ಹೆಚ್ಚಿಸುವ ಯೋಜನೆಯನ್ನು ಸರಕಾರವು ಹೊಂದಿದೆ.

ಆದರೆ ಸರ್ವೋಚ್ಚ ನ್ಯಾಯಾಲಯದ ಆದೇಶವು ಸರಕಾರದ ಈ ಯೋಜನೆಯನ್ನು ಹಳಿ ತಪ್ಪಿಸಬಹುದು ಎಂದು ಹೇಳಿರುವ ಪ್ರಧಾನಿಗಳ ಆರ್ಥಿಕ ಸಲಹಾ ಮಂಡಳಿಯ ಮಾಜಿ ಸದಸ್ಯೆ ಹಾಗೂ ಆರೋಗ್ಯ ತಜ್ಞೆ ಶಮಿಕಾ ರವಿ ಅವರು, ಪರೀಕ್ಷೆಗಳ ಸಂಖ್ಯೆ ಕಡಿಮೆಯಾಗುತ್ತ ಹೋಗುತ್ತದೆ ಮತ್ತು ದೇಶಾದ್ಯಂತ ಪರೀಕ್ಷಾ ಸಾಮರ್ಥ್ಯವನ್ನು ಹೆಚ್ಚಿಸುವುದು ನಮ್ಮ ಮುಖ್ಯ ಗುರಿಯಾಗಿ ರುವುದರಿಂದ ಇದು ದೊಡ್ಡ ಸಮಸ್ಯೆಯಾಗಲಿದೆ. ಇತರ ಕ್ಷೇತ್ರಗಳಂತೆ ಆರೋಗ್ಯ ಕ್ಷೇತ್ರವೂ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ ಮತ್ತು ಉಚಿತ ಸೌಲಭ್ಯಗಳನ್ನು ಒದಗಿಸುವ ಸ್ಥಿತಿಯಲ್ಲಿಲ್ಲ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News