ಕಾರಣ ಕೇಳಿ ಜ್ಯಬಿಲಿಯಂಟ್ ಕಂಪೆನಿಗೆ ನೋಟಿಸ್ ನೀಡಲಾಗಿದೆ: ಸಚಿವ ವಿ.ಸೋಮಣ್ಣ

Update: 2020-04-09 16:23 GMT

ಮೈಸೂರು,ಎ.9: ನಂಜನಗೂಡಿನ ಜ್ಯಬಿಲಿಯಂಟ್ ಕಾರ್ಖಾನೆಯಿಂದ ಕೊರೋನ ಸೋಂಕು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಈಗಾಗಲೇ ಕಂಪನಿಗೆ ನೋಟಿಸ್ ನೀಡಲಾಗಿದ್ದು, ಮುಖ್ಯಮಂತ್ರಿಗಳಿಗೆ ಸಂಪೂರ್ಣ ಮಾಹಿತಿ ನೀಡಲಾಗಿದೆ ಎಂದು ವಸತಿ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ತಿಳಿಸಿದರು.

ನಗರದ ಸರ್ಕಾರಿ ಅತಿಥಿಗೃಹದಲ್ಲಿ ಗುರುವಾರ ಕೊರೋನ ಸಂಬಂಧ ಅಧಿಕಾರಿಗಳಿಂದ ಮಾಹಿತಿ ಪಡೆದು ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು. ಜ್ಯಬಿಲಿಯಂಟ್ ಕಂಪೆನಿ ಪ್ರಾರಂಭಕ್ಕೆ ರಾಜಕಾರಣಿಗಳ ಒತ್ತಡ ಇದೆ ಎಂದು ಸ್ಥಳೀಯ ಶಾಸಕ ಹರ್ಷವರ್ಧನ್ ಹೇಳಿದ್ದಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಸೋಮಣ್ಣ, ಅವರು ಯಾವ ಉದ್ದೇಶದಲ್ಲಿ ಹೇಳಿದ್ದಾರೊ ಗೊತ್ತಿಲ್ಲ, ನಾವು ಮಾತನಾಡುವ ಮೊದಲು ವಸ್ತುಸ್ಥಿತಿಯನ್ನು ಅರ್ಥಮಾಡಿಕೊಳ್ಳಬೇಕು. ಕಾರ್ಖಾನೆಯ ಕಾರ್ಮಿಕರ ಹಿತದೃಷ್ಟಿ ನೋಡಿ ಮಾತನಾಡಬೇಕಿದೆ. ಜ್ಯಬಿಲಿಯಂಟ್ ಕಾರ್ಖಾನೆಯ ನೌಕರರು ಸೋಂಕಿನಿಂದ ಹೊರ ಬಂದ ನಂತರ ಬೇರೆ ವಿಚಾರ ಚರ್ಚೆ ಮಾಡೋಣ ಎಂದು ಹೇಳಿದರು.

ಜ್ಯಬಿಲಿಯಂಟ್ ಕಂಪನಿಯ ವ್ಯಕ್ತಿಯಿಂದ ಕೊರೋನ ಸೋಂಕು ಹೆಚ್ಚು ಹೆಚ್ಚು ಹರಡುತ್ತಿದ್ದು, ಈ ಸಂಬಂಧ ಕಾರಣ ಕೇಳಿ ಜ್ಯಬಿಲಿಯಂಟ್ ಔಷಧ ಕಂಪನಿಗೆ ನೋಟಿಸ್ ನೀಡಲಾಗಿದೆ. ಕೊರೋನ ಸೋಂಕು ಪತ್ತೆಯಾದ ಮೊದಲ ವ್ಯಕ್ತಿಯ ವಿಚಾರಣೆಯನ್ನು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ನೇತೃತ್ವದಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ನಡೆಸುತ್ತಿದ್ದಾರೆ. ಯಾರು ಎಷ್ಟೇ ದೊಡ್ಡವರಾದರೂ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಮೈಸೂರು ಜಿಲ್ಲೆಯಲ್ಲಿ ಜ್ಯಬಿಲಿಯಂಟ್ ಕಂಪನಿಯಿಂದ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಇಂದು ಸಹ ಎರಡು ಪಾಸಿಟಿವ್ ಬಂದಿದೆ.  ಜ್ಯಬಿಲಿಯಂಟ್ ಕಂಪನಿಯಿಂದ ಮಂಡ್ಯ ಜಿಲ್ಲೆಗೂ ಕೊರೋನ ಸೋಂಕು ಹಬ್ಬಿದೆ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು ಸೂಕ್ತ ತನಿಖೆ ನಡೆಯಲಿದೆ ಎಂದು ಹೇಳಿದರು.

ರಾಜ್ಯದಲ್ಲಿ 17 ಜಿಲ್ಲೆಗಳು ಕೊರೋನ ಸೋಂಕಿರತನ್ನು ಹೊಂದಿದೆ. ಮೈಸೂರು ಜಿಲ್ಲೆಯನ್ನು ರೆಡ್‍ ಝೋನ್ ಎಂದು ಘೋಷಿಸಲಾಗಿದೆ. ಲಾಕ್ ಡೌನ್ ವಿಸ್ತರಣೆ ಸಂಬಂಧ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡಲಾಗಿದ್ದು, ಪ್ರಧಾನ ಮಂತ್ರಿಗಳೊಂದಿಗೆ ಚರ್ಚಿಸಿ ಮುಖ್ಯಮಂತ್ರಿಗಳು ನಿರ್ಧಾರ ಮಾಡಲಿದ್ದಾರೆ ಎಂದು ಹೇಳಿದರು.

ಇನ್ನು ಪಡಿತರ ವಿತರಣೆಯಲ್ಲಿ ಯಾವುದೇ ಸಮಸ್ಯೆ ಅಗಿಲ್ಲ, ಒಟಪಿ ನಂಬರ್ ಬರಲು ಕೆಲವು ಕಡೆ ತಾಂತ್ರಿಕ ತೊಂದರೆ ಆಗುತ್ತಿರುವುದು ಗಮನಕ್ಕೆ ಬಂದಿದೆ. ಆದ್ದರಿಂದ ಇನ್ನು ಮುಂದೆ ಕಾರ್ಡುದಾರರ ಮೊಬೈಲ್ ಸಂಖ್ಯೆ ಬರೆದು 2 ತಿಂಗಳ ಅಕ್ಕಿ ನೀಡುವಂತೆ ತಿಳಿಸಲಾಗಿದೆ. ಒಂದೆರಡು ದಿನಗಳಲ್ಲಿ ಎಲ್ಲವೂ ಸರಿ ಹೋಗುತ್ತದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News