ಹಾಸನ ಜಿಲ್ಲೆಯಲ್ಲಿ ಇದುವರೆಗೆ ಕೊರೋನ ಪ್ರಕರಣ ದೃಢಪಟ್ಟಿಲ್ಲ: ಜಿಲ್ಲಾಧಿಕಾರಿ ಆರ್.ಗಿರೀಶ್

Update: 2020-04-09 17:04 GMT

ಹಾಸನ, ಎ.9: ದೇಶದಲ್ಲಿ ಆವರಿಸಿರುವ ಕೊರೋನ ವೈರಸ್ ಹಾಸನ ಜಿಲ್ಲೆಯಲ್ಲಿ ಇಲ್ಲಿವರೆಗೂ ಯಾವುದೇ ಪಾಸಿಟಿವ್ ಪತ್ತೆಯಾಗಿಲ್ಲ. ಜನರು ಆತಂಕ ಪಡುವುದು ಬೇಡ. ಮುಂದಿನ ಎರಡು ವಾರಗಳ ಕಾಲ ಹೆಚ್ಚಿನ ಜಾಗೃತಿ ಇರಲಿ ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ಮನವಿ ಮಾಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ವಿದೇಶಗಳಿಂದ ಬಂದಿದ್ದ ಎಲ್ಲರನ್ನೂ ಪರೀಕ್ಷೆಗೊಳಪಡಿಸಿದ್ದು, ಯಾವುದೇ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿಲ್ಲ. ಜಿಲ್ಲಾ ಪೊಲೀಸ್ ಇಲಾಖೆ ಕೂಡ ನಮಗೆ ಸಂಪೂರ್ಣ ಸಹಕಾರ ನೀಡುತ್ತಿದೆ. ಸಾರ್ವಜನಿಕರಿಗೆ ಅವಶ್ಯ ವಸ್ತುಗಳನ್ನ ಪೂರೈಕೆ ಮಾಡಲು ಎಲ್ಲ ರೀತಿಯ ಕ್ರಮಗಳನ್ನ ಕೈಗೊಂಡಿದ್ದು, ಮತ್ತೆ ಹೆಚ್ಚುವರಿಯಾಗಿ 4 ಮಾರುಕಟ್ಟೆಗಳನ್ನ ತೆರೆದಿದ್ದು, ಜನ ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಅಗತ್ಯ ವಸ್ತುಗಳನ್ನು ಕೊಂಡುಕೊಳ್ಳುವ ಮೂಲಕ ಸಹಕರಿಸಬೇಕು ಎಂದ ಅವರು, ಈಗಾಗಲೇ ಜಿಲ್ಲಾಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯಾಗಿ ಪರಿವರ್ತಿಸಲಾಗಿದ್ದು, ಜಿಲ್ಲೆಗೆ ರ‍್ಯಾಪಿಡ್ ಕಿಟ್ ಬರುತ್ತಿದ್ದು, ಈ ಕಿಟ್ ಮೂಲಕ ಕೇವಲ ಅರ್ಧಗಂಟೆಯಲ್ಲೇ ವರದಿ ಪಡೆಯಬಹುದಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಎಲ್ಲ ರೀತಿಯ ಸಿದ್ದತೆಗಳನ್ನ ಮಾಡಿಕೊಳ್ಳಲಾಗಿದೆ. ಎಲ್ಲಾ ತಾಲೂಕುಗಳಲ್ಲೂ ನಿರಾಶ್ರಿತರ ಕೇಂದ್ರಗಳನ್ನ ತೆರೆಯಲಾಗಿದ್ದು, ಸುಮಾರು 250ಕ್ಕೂ ಹೆಚ್ಚು ಮಂದಿ ಇಲ್ಲಿ ಆಶ್ರಯ ಪಡೆಯುತ್ತಿದ್ದು, ಅವರಿಗೆ ಎಲ್ಲ ರೀತಿಯ ಅಗತ್ಯ ವಸ್ತುಗಳನ್ನ ಪೂರೈಕೆ ಮಾಡಲಾಗುತ್ತಿದೆ. ಎಸ್ಟೇಟ್ ಗಳಲ್ಲಿ 5400 ಜನರು ಹೊರಗಿನಿಂದ ಬಂದಿದ್ದು, ಅವರಿಗೂ ಎಲ್ಲಾ ರೀತಿಯ ಅಗತ್ಯ ಸೌಕರ್ಯಗಳನ್ನು ಕಲ್ಪಿಸಲಾಗಿದೆ ಎಂದರು. 

ಜಿಲ್ಲಾ ಪೊಲೀಸ್ ವರಿಷ್ಢಾಧಿಕಾರಿ ಶ್ರೀನಿವಾಸ್ ಗೌಡ ಮಾತನಾಡಿ, ಗುರುವಾರದಂದು ಒಂದೇ ದಿನದಲ್ಲಿ ಸಾವಿರಾರು ದ್ವಿಚಕ್ರ ಹಾಗೂ ಕಾರುಗಳನ್ನು ಸೀಝ್ ಮಾಡಲಾಗಿದೆ, ಅದೇ ರೀತಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ವಿಫಲವಾದ ಅಂಗಡಿಗಳ ಮೇಲೂ ಕ್ರಮಕೈಗೊಂಡು ಕೇಸ್ ದಾಖಲಿಸಲಾಗಿದೆ. ಯುವಕರು ಅನಗತ್ಯವಾಗಿ ಮನೆಯಿಂದ ಹೊರ ಬಂದು ಬೈಕ್ ಗಳಲ್ಲಿ ಅಡ್ಡಾಡುತ್ತಿರುವುದು ಗಮನಕ್ಕೆ ಬಂದಿದ್ದು, ನಮ್ಮ ಕಣ್ಣಿಗೆ ಏನಾದರೂ ಅವರು ಬಿದ್ದರೆ ಸೀಝ್ ಗ್ಯಾರೆಂಟಿ. ಸಾರ್ವಜನಿಕರು ಮನೆಯಲ್ಲೇ ಇದ್ದು, ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕೆಂದು ಇದೆ ವೇಳೆ ಮನವಿ ಮಾಡಿದರು. ಕೃಷಿ ಯಂತ್ರ ರಿಪೇರಿಗೆ ಅನುಮತಿ ನೀಡಲಾಗಿದೆ. ಕೃಷಿ ಚಟುವಟಿಕೆಗೆ ಅನುಮತಿ ನೀಡಲಾಗಿದೆ. ಚಿಕಿತ್ಸೆ ನಿರಾಕರಿಸುವ ಖಾಸಗಿ ಆಸ್ಪತ್ರೆಗಳ ವಿರುದ್ಧ ಕ್ರಮ, ಅಂಥವರ ಲೈಸೆನ್ಸ್ ರದ್ದು ಮಾಡಲಾಗುವುದು. ಜಿಲ್ಲೆಯಲ್ಲಿ 21 ಚೆಕ್ ಪೋಸ್ಟ್ ಇದೆ, ಸುಳ್ಳು ಹೇಳಿ ಒಳ ಬಂದವರ ವಿರುದ್ಧ ಕ್ರಮಕೈಗೊಳ್ಳುತ್ತೇವೆ. ಹೈದರಾಬಾದ್ ನಿಂದ ಓರ್ವ ವ್ಯಕ್ತಿ ಬಂದಿದ್ದಾನೆ. ಆತನನ್ನು ಕ್ವಾರಂಟೈನ್ ನಲ್ಲಿ ಇಡಲಾಗಿದೆ ಎಂದು ವಿವರ ನೀಡಿದರು.

ಸುದ್ದಿಗೋಷ್ಟಿಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಬಿ.ಎ. ಪರಮೇಶ್, ಅಪರ ಜಿಲ್ಲಾಧಿಕಾರಿ ಕವಿತಾ ರಾಜರಾಂ, ಆರೋಗ್ಯಾಧಿಕಾರಿ ಸತೀಶ್ ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News