ದಿಲ್ಲಿ ಧಾರ್ಮಿಕ ಸಭೆಯಿಂದ ಬಂದ 60 ಮಂದಿಯ ವರದಿ ನೆಗೆಟಿವ್: ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಆರ್.ಲತಾ

Update: 2020-04-09 17:45 GMT

ಚಿಕ್ಕಬಳ್ಳಾಪುರ, ಎ.9: ಜಿಲ್ಲೆಯಲ್ಲಿ ಇದುವರೆಗೆ 12 ಜನರಿಗೆ ಕೊರೋನ ಸೋಕು ದೃಢಪಟ್ಟಿದ್ದು, ಇದರಲ್ಲಿ ಮೂವರು ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಓರ್ವ ಮಹಿಳೆ ಮೃತಪಟ್ಟಿದ್ದು, ಉಳಿದ 8 ಜನರು ಆರೋಗ್ಯವಾಗಿದ್ದು ಮುಂದಿನ ಎರಡು ದಿನಗಳಲ್ಲಿ 6 ಮಂದಿ ಚೇತರಿಸಿಕೊಳ್ಳಲಿದ್ದು, ಅವರು ಮನೆಗೆ ವಾಪಾಸ್ಸಾಗುವ ಸಾಧ್ಯತೆ ಇದೆ ಎಂದು ಜಿಲ್ಲಾಧಿಕಾರಿ ಆರ್.ಲತಾ ಅವರು ತಿಳಿಸಿದ್ದಾರೆ.

ಜಿಲ್ಲೆಯಿಂದ ದಿಲ್ಲಿಯ ತಬ್ಲೀಗ್ ಜಮಾತ್‍ ನ ಧಾರ್ಮಿಕ ಸಭೆಗೆ ಸುಮಾರು 61 ಜನರು ಪ್ರಯಾಣ ಬೆಳಸಿದ್ದು ಇವರೆಲ್ಲರನ್ನು ಪರೀಕ್ಷೆಗೆ ಒಳಪಡಿಸಿದಾಗ 60 ಮಂದಿಗೆ ನೆಗೆಟಿವ್ ಎಂದು ವರದಿಯಾಗಿದೆ. ಉಳಿದ ಒಂದು ಪ್ರಕರಣ ಮಾತ್ರ ಪಾಸಿಟಿವ್ ಎಂದು ಎಪ್ರಿಲ್ 8ರಂದು ವರದಿಯಾಗಿದೆ. ಇವರ ಜೊತೆ ಪ್ರಾಥಮಿಕ ಸಂಪರ್ಕದಲ್ಲಿದ್ದ 31 ಜನರ ಪೈಕಿ 20 ಜನರ ವರದಿ ನೆಗಟಿವ್ ಆಗಿದ್ದು ಉಳಿದ 11 ಜನರ ವರದಿ ನಾಳೆ ಬರುವ ಸಾಧ್ಯೆತೆ ಇದೆ ಎಂದು ತಿಳಿಸಿದರು.

ಪಾಸಿಟಿವ್ ಪ್ರಕರಣಗಳ ಜೊತೆ ಸಂಪರ್ಕದಲ್ಲಿದ್ದ ಒಬ್ಬರಿಗೆ ಎಪ್ರಿಲ್ 9ರಂದು ಸೋಂಕು ಪತ್ತೆಯಾಗಿದೆ. ಇತ್ತೀಚೆಗೆ ಹಿಂದೂಪುರದಲ್ಲಿ ಕೊರೋನ ಸೋಂಕಿಗೆ ಓರ್ವ ವ್ಯಕ್ತಿ ಮೃತಪಟ್ಟಿದ್ದು, ಅವರ ಮಗ ಭೌತಚಿಕಿತ್ಸಕ (ಪಿಜೀಯೋತೇರಫಿಸ್ಟ್) ನಾಗಿ ನಮ್ಮ ಜಿಲ್ಲೆಯ 8 ಮಂದಿಗೆ ಚಿಕಿತ್ಸೆಯನ್ನು ನೀಡಿದ್ದಾರೆ ಎಂದು ತಿಳಿದು ಬಂದಿರುವ ಹಿನ್ನೆಲೆಯಲ್ಲಿ ಈ 8 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು ಎಲ್ಲರ ವರದಿ ನೆಗಟಿವ್ ಬಂದಿದೆ. ಸಾರ್ವಜನಿಕರು ಕೊರೋನ ತಡೆಗೆ ಲಾಕ್‍ಡೌನ್ ಅನ್ನು ಶೇ. 100ರಷ್ಟು ಪಾಲನೆ ಮಾಡಿದರೆ ಮಾತ್ರ ಕೊರೋನ ವೈರೆಸ್ ನಿಯಂತ್ರಿಸಲು ಸಾಧ್ಯವಾಗುತ್ತದೆ. ಆದ್ದರಿಂದ ಜಿಲ್ಲೆಯ ಎಲ್ಲಾ ನಾಗರಿಕರು ಮನೆಯಲ್ಲೆ ಇದ್ದು ಕೊರೋನ ತಡೆಗೆ ಸಹಕರಿಸಬೇಕು ಎಂದು ಹೇಳಿದರು.

ನ್ಯಾಯಾಬೆಲೆ ಅಂಗಡಿಗಳಲ್ಲಿ ಯಾವುದೇ ಕಾರಣಕ್ಕೂ ಪಡಿತರ ಚೀಟಿದಾರರು ಹಣ ಕೊಡುವ ಅವಶ್ಯಕತೆ ಇಲ್ಲ. ಜಿಲ್ಲಾದ್ಯಂತ ಇದುವರೆಗೂ 10 ನ್ಯಾಯಬೆಲೆ ಅಂಗಡಿಗಳನ್ನು ಅಮಾನತು ಮಾಡಲಾಗಿದ್ದು, 10 ನ್ಯಾಯಬೆಲೆ ಅಂಗಡಿಗಳಿಗೆ ಶೋಕಾಸ್ ನೋಟೀಸ್ ನೀಡಲಾಗಿದೆ. ನ್ಯಾಯಬೆಲೆ ಅಂಗಡಿಗಳಲ್ಲಿ  ಯಾವುದೇ ಓಟಿಪಿ ಸಂಖ್ಯೆ ಕೇಳುವ ಹಾಗಿಲ್ಲ. ಸಹಿ ಮಾಡಿಸಿಕೊಂಡು ಪಡಿತರ ಧಾನ್ಯಗಳನ್ನು ವಿತರಣೆ ಮಾಡಬೇಕು ಹಾಗೂ ಯಾವುದಾದರೂ ಉಲ್ಲಂಘನೆ ಪ್ರಕರಣಗಳಿದ್ದರೆ ತಾಲೂಕು ದಂಡಾಧಿಕಾರಿಗಳಿಗೆ ಅಥವಾ ಜಿಲ್ಲಾಡಳಿತ ಗಮನಕ್ಕೆ ತರಬೇಕು ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News