ವಲಸೆ ಕಾರ್ಮಿಕರಿಗೆ ಉಚಿತ ಊಟ-ವಸತಿ ಕಲ್ಪಿಸಲು ಸುತ್ತೋಲೆ

Update: 2020-04-09 18:11 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಎ. 9: ಕೊರೋನ ವೈರಸ್ ಸೋಂಕು ನಿಯಂತ್ರಣಕ್ಕಾಗಿ ವಿಧಿಸಿರುವ ಲಾಕ್‍ಡೌನ್ ಅವಧಿಯಲ್ಲಿ ವಲಸೆ ಕಾರ್ಮಿಕರಿಗೆ, ವಸತಿ ಸಹಿತರು, ಕೂಲಿ ಕಾರ್ಮಿಕರು ಸೇರಿ ಇನ್ನಿತರ ದುರ್ಬಲ ವರ್ಗದವರಿಗೆ ಸೂಕ್ತ ಉಚಿತವಾಗಿ ಊಟ, ವಸತಿ, ಶುದ್ಧ ಕುಡಿಯುವ ನೀರು ಮತ್ತು ವೈದ್ಯಕೀಯ ಆರೈಕೆ ವ್ಯವಸ್ಥೆ ಕಲ್ಪಿಸಬೇಕು ಎಂದು ಎಲ್ಲ ಸ್ಥಳೀಯ ಸಂಸ್ಥೆಗಳಿಗೆ, ನಗರಾಭಿವೃದ್ಧಿ ಇಲಾಖೆ ನಿರ್ದೇಶನ ನೀಡಿದೆ.

ಬಿಬಿಎಂಪಿ ಸೇರಿದಂತೆ ರಾಜ್ಯದ ಎಲ್ಲ ನಗರ ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ ಕೊರೋನ ವೈರಸ್ ಸೋಂಕು ಪರಿಣಾಮಕಾರಿಯಾಗಿ ತಡೆಗಟ್ಟುವ ನಿಟ್ಟಿನಲ್ಲಿ ವಿಶೇಷವಾಗಿ ವಲಸೆ, ಕಟ್ಟಡ ಕಾರ್ಮಿಕರ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಅಲ್ಲದೆ, ಸ್ಥಳೀಯ ಮಟ್ಟದಲ್ಲಿ ಶಾಲೆ ಅಥವಾ ಸಮುದಾಯ ಭವನಗಳಲ್ಲಿ ವಸತಿ ಸೌಲಭ್ಯ ಕಲ್ಪಿಸಬೇಕು ಎಂದು ಸೂಚಿಸಲಾಗಿದೆ.

ಇಂತಹ ಆಶ್ರಯ ಕೇಂದ್ರಗಳಲ್ಲಿ ಶುದ್ಧ ಕುಡಿಯುವ ನೀರಿನ ಲಭ್ಯತೆ, ಶೌಚಾಲಯ ಒಳಗೊಂಡಂತೆ ಸ್ವಚ್ಛತೆ ಮತ್ತು ನೈರ್ಮಲ್ಯತೆ ಕಾಪಾಡುವುದು, ಕೈತೊಳೆಯಲು ಸ್ಯಾನಿಟೈಸರ್/ಸಾಬೂನು, ಅಗತ್ಯವಿದ್ದಲ್ಲಿ ಮಾಸ್ಕ್ ವ್ಯವಸ್ಥೆ ಕಲ್ಪಿಸಬೇಕು. ಜಿಲ್ಲಾಡಳಿತದಿಂದ ಆರೋಗ್ಯ ತಂಡಗಳು ನಿಯಮಿತವಾಗಿ ಸದರಿ ಕೇಂದ್ರಗಳಿಗೆ ಭೇಟಿ ನೀಡಿ ಅನಾರೋಗ್ಯ ಪೀಡಿತರಿದ್ದರೆ ಅವರಿಗೆ ಸೂಕ್ತ ಚಿಕಿತ್ಸೆ ಒದಗಿಸಬೇಕು.

ಎಲ್ಲ ಸಾರ್ವಜನಿಕ ಮತ್ತು ಸಮುದಾಯಕ ಶೌಚಾಲಯಗಳನ್ನು ಲಾಕ್‍ಡೌನ್ ಅವಧಿಯಲ್ಲಿ ಶೌಚಾಲಯ ಸೌಲಭ್ಯ ಇಲ್ಲದಿರುವ ಸಾರ್ವಜನಿಕರ ಉಪಯೋಗಕ್ಕೆ ಕಡ್ಡಾಯವಾಗಿ ತೆರೆದಿರಬೇಕು. ಅಲ್ಲದೆ, ಅವುಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸಬೇಕು. ಮೇಲ್ಕಂಡ ಎಲ್ಲ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಅಲ್ಲದೆ, ಪ್ರತಿದಿನ ದಾಖಲಾತಿಯೊಂದಿಗೆ ಛಾಯಾಚಿತ್ರಗಳನ್ನು ಒಳಗೊಂಡಂತೆ ನಿರ್ವಹಿಸಬೇಕು ಎಂದು ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ಸುತ್ತೋಲೆ ಹೊರಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News