ಸುಮ್ಮನೆ ಕೂರಲು ಸಾಧ್ಯವಿಲ್ಲ: ಒಂದು ಸಮುದಾಯದ ವಿರುದ್ಧ ದ್ವೇಷದ ಹೇಳಿಕೆಗೆ ಡಿ.ಕೆ.ಶಿವಕುಮಾರ್ ಕಿಡಿ

Update: 2020-04-10 13:01 GMT

ಬೆಂಗಳೂರು, ಎ. 10: ರಾಜ್ಯದಲ್ಲಿ ಅಶಾಂತಿ ಸೃಷ್ಟಿಸಲು ಕೆಲವರು ಪ್ರಯತ್ನಿಸುತ್ತಿದ್ದು, ಅನೇಕ ದ್ವೇಷದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಈ ಬಗ್ಗೆ ಪೊಲೀಸರು ಗಂಭೀರವಾಗಿ ಪರಿಗಣಿಸಿ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಗ್ರಹಿಸಿದಾರೆ.

ಶುಕ್ರವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷದ ನಾಯಕರು ಹೇಳಿಕೆಗಳನ್ನು ನೀಡಿದರೆ ಕೂಡಲೇ ಕೇಸು ದಾಖಲಿಸಿ ಬಂಧಿಸಿದ್ದ ಪೊಲೀಸರು ಇದೀಗ ಏಕೆ ಇನ್ನೂ ಕ್ರಮ ಕೈಗೊಂಡಿಲ್ಲ. ಈ ಬಗ್ಗೆ ಕೆಪಿಸಿಸಿ ಕಾರ್ಯಾಧ್ಯಕ್ಷರು ಪೊಲೀಸರು ಜತೆ ಚರ್ಚೆ ನಡೆಸಲಿದ್ದಾರೆ ಎಂದರು.

ರಾಜ್ಯದಲ್ಲಿ ಒಂದು ಸಮುದಾಯದ ವಿರುದ್ಧ ದ್ವೇಷ ಸೃಷ್ಟಿಸುವ ಮೂಲಕ ಅಶಾಂತಿ ಉಂಟು ಮಾಡುವ ಸಂಬಂಧ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಮಾಹಿತಿ ನೀಡಿದ್ದು, ಸೂಕ್ತ ಮುನ್ನಚ್ಚರಿಕೆ ಕೈಗೊಳ್ಳಬೇಕೆಂದು ಕೋರಲಾಗಿದೆ. ಮುಂದಿನ ದಿನಗಳಲ್ಲಿ ಪೊಲೀಸರು ಯಾವ ಕ್ರಮ ಕೈಗೊಳ್ಳಲಿದ್ದಾರೆಂದು ಕಾದುನೋಡುತ್ತೇವೆ. ವಿಪಕ್ಷದಲ್ಲಿ ನಾವು ಸುಮ್ಮನೆ ಕೂರಲು ಸಾಧ್ಯವಿಲ್ಲ. ರಾಜ್ಯದಲ್ಲಿ ಶಾಂತಿ ಕಾಪಾಡುವುದು ನಮ್ಮ ಕರ್ತವ್ಯ ಎಂದು ಶಿವಕುಮಾರ್ ಹೇಳಿದರು.

ಸಹಕಾರ: ಎ.14ರ ಬಳಿಕ ಲಾಕ್‍ಡೌನ್ ವಿಸ್ತರಣೆ ಸಂಬಂಧ ಸರಕಾರ ಯಾವ ತೀರ್ಮಾನ ಕೈಗೊಳ್ಳಲಿದೆ ಎಂಬ ನಿರೀಕ್ಷೆಯಲ್ಲಿದ್ದೇವೆ. ನಮ್ಮ ಪಕ್ಷದ ನಾಯಕರೊಂದಿಗೆ ಚರ್ಚಿಸಿ ಈ ಬಗ್ಗೆ ಅಭಿಪ್ರಾಯ ನೀಡುತ್ತೇವೆ. ರಾಜ್ಯದಲ್ಲಿ ನಮ್ಮ ಪಕ್ಷದ ಕಾರ್ಯಕರ್ತರು ಏನೆಲ್ಲ ಕೆಲಸ ಮಾಡುತ್ತಿದ್ದಾರೆಂದು ಗಮನಿಸುತ್ತಿದ್ದೇನೆ. ಕಾರ್ಯಕರ್ತರು ಅಗತ್ಯವಿರುವವರಿಗೆ ನೆರವು ನೀಡಬೇಕು. ವಿಪಕ್ಷವಾಗಿ ಟೀಕೆ ಮಾಡುವುದಿಲ್ಲ, ಒಳ್ಳೆಯ ಕೆಲಸಗಳಿಗೆ ಸಹಕಾರ ನೀಡಬೇಕು. ಸರಕಾರದ ನ್ಯೂನತೆಗಳನ್ನು ಗಮನಕ್ಕೆ ತಂದು ಎಚ್ಚರಿಕೆ ನೀಡಬೇಕು. ಆ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತೇವೆ ಎಂದ ಅವರು, ಕೊರೋನ ವೈರಸ್ ಸೋಂಕು ನಿಯಂತ್ರಣಕ್ಕೆ ಸರಕಾರಕ್ಕೆ ಪಕ್ಷ ಸಹಕಾರ ನೀಡಲಿದೆ ಎಂದು ಹೇಳಿದರು.

ಬಡವರಿಗೆ ಸರಕಾರದಿಂದ ನೀಡುವ ಆಹಾರ ಧಾನ್ಯಗಳ ಮೇಲೆ ಬಿಜೆಪಿ ನಾಯಕರ ಭಾವಚಿತ್ರ ಸರಕಾರದ ಚಿಹ್ನೆ ಮುದ್ರಿಸಿದ್ದು ಸರಿಯಲ್ಲ. ವೈಯಕ್ತಿಕ ಹಣದಲ್ಲಿ ನೆರವು ನೀಡಿದರೆ ಯಾರ ಫೋಟೋ ಬೇಕಾದರೂ ಹಾಕಿಕೊಳ್ಳಲಿ. ನಮ್ಮ ಅಭ್ಯಂತರವಿಲ್ಲ. ಆದರೆ, ಸರಕಾರದ ಚಿಹ್ನೆ ಮುದ್ರಿಸಿದ್ದು ಅಧಿಕಾರದ ದುರುಪಯೋಗ. ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಶಿವಕುಮಾರ್ ಆಗ್ರಹಿಸಿದರು.

ಸರಕಾರ ಯಾರನ್ನು ಬೇಕಾದರೂ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡಿಕೊಳ್ಳಲಿ. ಅದು ಅವರ ವೈಯಕ್ತಿಕ ವಿಚಾರ, ನಮಗೆ ಬೇಕಿಲ್ಲ. ನಾವು ವಿಪಕ್ಷವಾಗಿ ಸಲಹೆ ನೀಡುತ್ತೇವೆ. ಆಡಳಿತದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಬೇಕು ಎಂದು ಮನವಿ ಮಾಡುತ್ತೇನೆ ಎಂದು ಹೇಳಿದರು.

ರಾಜ್ಯದಲ್ಲಿ ವೆಂಟಿಲೇಟರ್, ಮಾಸ್ಕ್, ಪಿಪಿಇ ಕಿಟ್ ಖರೀದಿ ಗೊಂದಲ ಮತ್ತು ಬಡವರಿಗೆ ಸಮರ್ಪಕ ಆಹಾರ ಪದಾರ್ಥ ಸಿಗುತ್ತಿಲ್ಲ ಎಂಬ ಆರೋಪಗಳಿವೆ. ಈ ಬಗ್ಗೆ ರಾಜಕಾರಣ ಮಾಡುವುದಿಲ್ಲ. ಸರಕಾರ ತನ್ನ ತಪ್ಪುಗಳನ್ನು ಸರಿಪಡಿಸಿಕೊಳ್ಳಬೇಕು. ಅಲ್ಲದೆ, ಸಚಿವರು ಗೊಂದಲ ಸೃಷ್ಟಿಸುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.

ರಕ್ತದಾನಕ್ಕೆ ಸಲಹೆ: ರಾಜ್ಯದಲ್ಲಿ ರಕ್ತನಿಧಿಗಳಲ್ಲಿ ರಕ್ತದ ಕೊರತೆ ಸೃಷ್ಟಿಯಾಗಿರುವುದನ್ನು ಗಮನಿಸಿದ್ದು, ಆರೋಗ್ಯವಂತ ಯುವಕರು ಮತ್ತು ವಿದ್ಯಾರ್ಥಿಗಳು ರಕ್ತದಾನಕ್ಕೆ ಮುಂದಾಗಬೇಕು. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ರಕ್ತದಾನ ಮಾಡುವುದು ಎಲ್ಲರ ಜವಾಬ್ದಾರಿ. ಕೆಪಿಸಿಸಿ ವೈದ್ಯ ಘಟಕ ಶೀಘ್ರವೇ ಟಾಸ್ಕ್‍ಫೋರ್ಸ್‍ನಿಂದ ಸಹಾಯವಾಣಿ ಆರಂಭಿಸಲಾಗುವುದು ಎಂದು ಶಿವಕುಮಾರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News