'ನಾವು ಮುಸ್ಲಿಮರು, ನಮ್ಮನ್ನು ಮುಟ್ಟಿದರೆ ಕೊರೋನ ಬರುತ್ತದೆ': ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ಪರಾರಿಯಾದ ಯುವಕರು

Update: 2020-04-10 14:57 GMT
ಸಾಂದರ್ಭಿಕ ಚಿತ್ರ

ಮುಸ್ಲಿಮ್ ಯುವಕರೆಂದು ಆರೋಪಿಸಿ ಪತ್ರಿಕಾ ಹೇಳಿಕೆ ನೀಡಿದ ತಹಶೀಲ್ದಾರ್ ವಿರುದ್ಧ ದೂರು

ಮಂಡ್ಯ: ಯುಗಾದಿ ಹಬ್ಬಕ್ಕೆ ಮನೆಗೆ ಆಗಮಿಸಿದ್ದ ಮೂವರು ಯುವಕರು 'ನಾವು ಮುಸ್ಲಿಮರು, ನಮ್ಮನ್ನು ಮುಟ್ಟಿದರೆ ಕೊರೋನ ಬರುತ್ತದೆ’ ಎಂದು ಪೊಲೀಸರ ಮುಂದೆ ಹೇಳಿಕೆ ನೀಡಿ ಪರಾರಿಯಾಗಿರುವ ಘಟನೆ ಮಂಡ್ಯದಲ್ಲಿ ನಡೆದಿದ್ದು, ಪರಿಸರದಲ್ಲಿ ಇದು ತೀವ್ರ ಆತಂಕ ಸೃಷ್ಟಿಸಿತ್ತು. ಆದರೆ ಇದೀಗ ಆರೋಪಿಗಳು ಮುಸ್ಲಿಮರಲ್ಲ ಎನ್ನುವುದು ಬೆಳಕಿಗೆ ಬಂದಿದೆ.

ಪೊಲೀಸ್ ಕಾರ್ಯಾಚರಣೆ ನಡೆಸಿ ಯುವಕರನ್ನು ಬೂಕನಕೆರೆ ಹೋಬಳಿ, ಬಳ್ಳಕೆರೆ ಗ್ರಾಮದಲ್ಲಿ ಬಂಧಿಸಲಾಗಿದ್ದು, ಆರೋಪಿಗಳಾದ 1) ಮಹೇಶ, 2) ಅಭಿ 3) ಶ್ರೀನಿವಾಸ ಎಂಬವರನ್ನು ಬಂಧಿಸಿ, ಅವರ ವಿರುದ್ಧ ಎಫ್.ಐ.ಆರ್ ದಾಖಲಿಸಲಾಗಿದೆ. ಆದರೆ ಈ ಯುವಕರ ಆರಂಭದ ಹೇಳಿಕೆಯನ್ನಾಧರಿಸಿ ತಹಶೀಲ್ದಾರ್ ಅವರು ಮಾಧ್ಯಮಗಳಿಗೆ ಹೇಳಿಕೆ ನೀಡಿ ತೆಂಡೆಕೆರೆ ಚೆಕ್ ಪೋಸ್ಟ್‌ನಲ್ಲಿ ಆಟೋ ಮೂಲಕ ನಾಲ್ವರು ಮುಸ್ಲಿಂ ಯುವಕರು ತೆಂಡೆಕೆರೆ ಮೂಲಕ ಕೆ.ಆರ್.ಪೇಟೆ ಕಡೆ ಹೋಗಿದ್ದಾರೆ ಎಂದು ತಿಳಿಸಿರುವುದು, ಪರಿಸರದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಲು ಕಾರಣವಾಯಿತು. ತಹಶೀಲ್ದಾರರ ಈ ಹೇಳಿಕೆ ವೈರಲ್ ಆದ ಬಳಿಕ ಮುಸ್ಲಿಮರ ವಿರುದ್ಧ ದ್ವೇಷ ಹರಡಲು ದುಷ್ಕರ್ಮಿಗಳು ಈ ಘಟನೆಯನ್ನು ಬಳಸಿಕೊಂಡಿದ್ದಾರೆ. ತಹಶೀಲ್ದಾರರ ವರ್ತನೆಯ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ಅವರ ವಿರುದ್ಧ ಪೊಲೀಸ್ ವರಿಷ್ಠಾಧಿಕಾರಿಗೆ ದೂರನ್ನು ನೀಡಲಾಗಿದೆ.

"ಈ ಮೇಲಿನ ಆರೋಪಿಗಳು ತಾವು ತಪ್ಪಿಸಿಕೊಳ್ಳುವ ಉದ್ದೇಶದಿಂದ ಸಿಬ್ಬಂದಿಗೆ ಸುಳ್ಳು ಹೇಳಿ ಹೋಗಿದ್ದನ್ನು ನಾನು ಮಾಧ್ಯಮಗಳಿಗೆ ಹೇಳಿದ್ದೇನೆ. ಈ ವಿಷಯದ ಹಿಂದೆ ಯಾವುದೇ ದುರುದ್ದೇಶ ಇಲ್ಲ" ಎಂದು ಕೆ. ಆರ್. ಪೇಟೆ ತಾಲೂಕು ತಹಶೀಲ್ದಾರ್ ಶಿವಮೂರ್ತಿ ಸ್ಪಷ್ಟೀಕರಣ ನೀಡಿದ್ದಾರೆ.

ತಹಶೀಲ್ದಾರ್ ವಿರುದ್ಧ ಪತ್ರಕರ್ತ, ವಕ್ಫ್ ಸಲಹಾ ಸಮಿತಿ ಸದಸ್ಯ ನಝೀರ್ ಅಹಮದ್ ಮಂಡ್ಯ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದಾರೆ. ಎಪ್ರಿಲ್ 8ರಂದು ರಾತ್ರಿ ಸುಮಾರು 10 ಗಂಟೆಗೆ ಕೆ.ಆರ್.ಪೇಟೆ ತಾಲೂಕು ತೆಂಡೇಕೆರೆ ಚೆಕ್ ಪೋಸ್ಟ್‌ನಲ್ಲಿ ಆಟೋದಲ್ಲಿ ಬಂದ ಮೂವರು ಯುವಕರನ್ನು ಪೊಲೀಸರು ತಡೆದಿದ್ದರು. ಆಟೋ ಪಾಸ್ ಕೇಳಿದಾಗ 'ನಮಗೆ ಕೊರೋನ ವೈರಸ್ ತಗುಲಿದೆ, ನಮ್ಮನ್ನು ಮುಟ್ಟಿದರೆ ನಿಮಗೂ ಕೊರೋನ ಬರುತ್ತದೆ’ ಎಂದು ಆಟೋದಲ್ಲಿ ಕುಳಿತಿದ್ದ ಒಬ್ಬ ಯುವಕ ತನ್ನ ಕೈಯಲ್ಲಿದ್ದ ಸೀಲ್ ತೋರಿಸಿ ಹೆದರಿಸಿದ್ದಾನೆ ಎಂದು ಆರೋಪಿಸಲಾಗಿದೆ.

ಬಂಧಿತರ ಪೈಕಿ ಮಹೇಶ್ ಬೆಂಗಳೂರಿನಲ್ಲಿ ಆಟೋ ಓಡಿಸುವ ವೃತ್ತಿ ಮಾಡುತ್ತಿದ್ದು, ಯುಗಾದಿ ಹಬ್ಬಕ್ಕೆ ಸ್ವಗ್ರಾಮ ಬಳ್ಳೇಕೆರೆಗೆ ಬಂದಿದ್ದ. ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಮಹೇಶ್ ಕೈಗೆ ಗ್ರಾ.ಪಂ. ನವರು ಸೀಲ್ ಹಾಕಿ ಹೋಂ ಕ್ವಾರಂಟೈನ್ ನಲ್ಲಿ ಇರುವಂತೆ ಆದೇಶ ನೀಡಿದ್ದರು. ಆದರೆ ಮಹೇಶ್ ತನ್ನ ಸ್ನೇಹಿತರೊಂದಿಗೆ ಚಿನಕುರಳಿಗೆ ಹೋಗಿ ವಾಪಸ್ ಬರುವಾಗ ತೆಂಡೆಕೆರೆ ಚೆಕ್ ಪೋಸ್ಟ್ ನಲ್ಲಿ ಅಧಿಕಾರಿಗಳ ಮುಂದೆ ಸುಳ್ಳು ಹೇಳಿದ್ದಾನೆ ಎಂದು ಆರೋಪಿಸಲಾಗಿದೆ.

ಈ ಘಟನೆಯ ನಂತರ ತಹಶೀಲ್ದಾರ್ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಯಾವುದೇ ಮಾಹಿತಿ ಕಲೆ ಹಾಕದೆ, ತನಿಖೆ ನಡೆಸದೆ ಏಕಾಏಕಿ ಮುಸ್ಲಿಂ ಯುವಕರು ಪರಾರಿ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರಿಂದ ಈಗಾಗಲೇ ಮುಸ್ಲಿಮರ ವಿರುದ್ಧ ದ್ವೇಷ ಹರಡುವವರು ಅದನ್ನು ಬಳಸಿಕೊಂಡಿದ್ದಾರೆ. ಈ ಹೇಳಿಕೆಯಿಂದ ಕೋಮು ಸಾಮರಸ್ಯಕ್ಕೆ ಧಕ್ಕೆಯಾಗಿದೆ ಎನ್ನುವ ಆರೋಪಗಳು ಕೇಳಿ ಬರುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News